ಸಂ.ಕ. ಸಮಾಚಾರ ಕಲಬುರಗಿ: ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತುಬದ್ಧವಾದ ಹೈಕಮಾಂಡ್ ಇದ್ದು, ಅದರ ತೀರ್ಮಾನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರ ಸಂಪೂರ್ಣವಾಗಿ ಹೈಕಮಾಂಡ್ ವ್ಯಾಪ್ತಿಗೆ ಸೇರಿದ್ದು, ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದರು.
ಇದನ್ನೂ ಓದಿ: ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ
ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ: ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, “ಯತೀಂದ್ರ ಅವರು ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಬದಲಾವಣೆ ಆಗಬೇಕಾದರೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಈ ವಿಷಯದಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರೂ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಹೇಳಿದರು.
ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ: ಮೆಟ್ರೋ ರೈಲ್ವೆ ಟಿಕೆಟ್ ದರ ಪರಿಷ್ಕರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಚಿವರು ತಿಳಿಸಿದರು. ಮೆಟ್ರೋ ದರ ಪರಿಷ್ಕರಣೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಾರದ ವಿಷಯವಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದರು.
ಇದನ್ನೂ ಓದಿ: ಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್
ಈ ವಿಷಯದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ನಾಯಕರು ನಡೆಸಿದ ತಂತ್ರಗಾರಿಕೆ ಫಲಿಸಲಿಲ್ಲ. ಈಗ ಕೇಂದ್ರ ಸರ್ಕಾರವೇ ದರ ಪರಿಷ್ಕರಣೆಗೆ ತಡೆ ನೀಡಿರುವುದರಿಂದ ಬಿಜೆಪಿಯ ಅಸಲಿ ಮುಖವಾಡ ಬಯಲಾಗಿದೆ ಎಂದು ಆರೋಪಿಸಿದರು. ಇದೇ ವೇಳೆ, ಬಿಜೆಪಿ ಸಂಸದರೇ ಕೇಂದ್ರದ ಮೇಲೆ ಒತ್ತಡ ಹೇರಿ ದರ ಪರಿಷ್ಕರಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿದರು.
ಜಿಬಿಎ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಈ ಕುರಿತು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡದೇ ಗೊಂದಲಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್
ಬ್ಯಾಲೇಟ್ ಪೇಪರ್ ವ್ಯವಸ್ಥೆಗೆ ಬಿಜೆಪಿ ವಿರೋಧಿಸುತ್ತಿದ್ದರೂ, ವಿಶ್ವದ ಅನೇಕ ದೊಡ್ಡ ರಾಷ್ಟ್ರಗಳಲ್ಲಿ ಇವಿಎಂ ಬಳಕೆ ಇಲ್ಲದೆ ಬ್ಯಾಲೇಟ್ ಪೇಪರ್ ಮೂಲಕವೇ ಚುನಾವಣೆ ನಡೆಯುತ್ತಿದೆ. ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ನಾನೇನು ಜ್ಯೋತಿಷಿ ಅಲ್ಲ: ಉಪಮುಖ್ಯಮಂತ್ರಿ ಡಿಕೆ ಶಿವುಕುಮಾರ್‌ಗೆ ಸಿಎಂ ಆಗುವ ಯೋಗ ಇದೆಯೇ? ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ ಗುಂಡೂರಾವ ಅವರು, ಯರ‍್ಯಾರಿಗೆ ಏನೇನು ಯೋಗ ಇದೆ ಎನ್ನುವುದು ಯಾರಿಗೆ ಗೊತ್ತು. ಅವರ ಯೋಗದ ಬಗ್ಗೆ ಹೇಳುವುದಕ್ಕೆ ನಾನೇನು ಜ್ಯೋತಿಷಿ ಅಲ್ಲ.
ಒಗ್ಗಟ್ಟಿನ ಸಂದೇಶ: ಒಟ್ಟಾರೆ, ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಆಂತರಿಕ ಗೊಂದಲಗಳಿಲ್ಲ. ಹೈಕಮಾಂಡ್ ಮಾರ್ಗದರ್ಶನದಂತೆ ಪಕ್ಷ ಏಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿ ನಡೆಸುತ್ತಿರುವ ಆರೋಪ ರಾಜಕಾರಣಕ್ಕೆ ಯಾವುದೇ ಮೌಲ್ಯವಿಲ್ಲ ಎಂಬ ಸಂದೇಶವನ್ನು ಸಚಿವ ದಿನೇಶ್ ಗುಂಡೂರಾವ್ ಈ ಮೂಲಕ ನೀಡಿದ್ದಾರೆ.
























