ಕಲ್ಯಾಣ ಕರ್ನಾಟಕದಲ್ಲಿ ಮುಂದುವರಿದ ಮಳೆ: ಸೇತುವೆಗಳು ಜಲಾವೃತ

0
39

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ನಿರಂತರ ಸುರಿಯುತ್ತಿದ್ದ ಮಳೆ ಹಗಲು ಹೊತ್ತಿನಲ್ಲಿ ಕಡಿಮೆಯಾಗಿದಂತೆ ಕಂಡು ಬಂದರೂ ರಾತ್ರಿಯಿಡೀ ಸುರಿಯುತ್ತಿದೆ. ತುಂಬಿ ತುಳುಕುತ್ತಿರುವ ಜಲಾಶಯಗಳ ನೀರು ನದಿಗಳಿಗೆ ಹರಿಬಿಟ್ಟ ಪರಿಣಾಮವಾಗಿ ಸೇತುವೆಗಳು ಜಲಾವೃತಗೊಂಡು ಸಂಚಾರವೇ ಸ್ಥಗಿತಗೊಂಡಿದೆ.

ಕಾಳಗಿ ತಾಲೂಕಿನ ಬೆಣ್ಣೆತೊರಾ ಜಲಾಶಯದ ನೀರು ಸುತ್ತಲಿನ ಗ್ರಾಮಗಳಿಗೆ ಹೊಕ್ಕು ತೊಂದರೆಯುಂಟಾಗಿದೆ. ಚಿತ್ತಾಪುರ ತಾಲೂಕಿನ ಕಾಗಿಣಾ ನದಿ ಪ್ರವಾಹದಿಂದ ದಂಡೋತಿ ಬಳಿಯ ಸೇತುವೆ ಜಲಾವೃತಗೊಂಡು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಚಿತ್ತಾಪುರದ ಜನರು ಕಲಬುರಗಿಗೆ ಬರಬೇಕಾದರೆ, 30ಕ್ಕೂ ಹೆಚ್ಚು ಕಿಮೀ ಸುತ್ತುಹಾಕಿ ಶಹಾಬಾದ, ವಾಡಿ ಕ್ರಾಸ್ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಚಿತ್ತಾಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡಗುರ್ತಿ ಗ್ರಾಮದ ಹಲವು ಮನೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ದವಸ ಧಾನ್ಯ, ಇನ್ನಿತರ ಸಮಾಗ್ರಿಗಳು ಕೊಚ್ಚಿಹೋಗಿವೆ. ಅಂದಾಜು 80ರಿಂದ 90 ಮನೆಗಳು ಜಲಾವೃತಗೊಂಡ ಪರಿಣಾಮವಾಗಿ ಗುಂಡಗುರ್ತಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ತೊಂದರೆಗೀಡಾದ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸೂಚಿಸಿದ್ದಾರೆ.

ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸೊನ್ನ ಬ್ಯಾರೇಜ್‌ನಿಂದ ಸಹ ಭೀಮಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ದೇವಲಗಾಣಗಾಪುರ, ಘತ್ತರಗಿ ಸೇತುವೆ ಹಾಗೂ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ.

ವಿಜಯಪುರದ ಸಿಂದಗಿ ಮತ್ತು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಳೆದೆರಡು ದಿನಗಳಿಂದ ಕಡಿತವಾಗಿದೆ. ಅಲ್ಲದೆ ತಾಲ್ಲೂಕಿನ ಮಲ್ಲಾಬಾದ, ಬಾದನಹಳ್ಳಿ, ಬಂಕಲದ, ಜೇವರ್ಗಿ ಬಿ ಗ್ರಾಮದ ಬೋರಿಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಘತ್ತರಗಾ ಹಾಗೂ ದೇವಲಗಾಣಗಾಪುರ ಸೇತುವೆಗಳಿಗೆ ಪೊಲೀಸರನ್ನು ಕಾವಲಿಡಲಾಗಿದೆ ಯಾರು ಸೇತುವೆಯನ್ನು ದಾಟುವ ಸಾಹಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದ್ದು ದರ್ಶನ ಹಾಗೂ ಪೂಜೆಯನ್ನು ಬಂದ್ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಮಣ್ಣೂರದಿಂದ ಇಂಡಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮುಳುಗಡೆಯಾಗಿದ್ದರಿಂದ ಸಂಪರ್ಕ ಕಡಿತವಾಗಿದೆ. ಭೀಮಾ ನದಿ ಒಳಹರಿವು ಹೆಚ್ಚುತ್ತಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹ ಆತಂಕ ಸೃಷ್ಟಿಯಾಗಿದೆ. ಅಲ್ಲದೇ ಅಕ್ಕಪಕ್ಕದ ಊರುಗಳಿಗೆ ನದಿ ನೀರು ನುಗ್ಗುವ ಭೀತಿ ಉಂಟಾಗಿದ್ದು, ನದಿ ತೀರದ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಡಂಗೂರ ಸಾರುವಂತೆ ಕಲಬುರಗಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Previous articleಕ್ರಿಕೆಟ್ ಅಂಗಳದ ವಿಶಿಷ್ಟ ಅಂಪೈರ್ ಡಿಕ್ಕಿ ಬರ್ಡ್ ಇನ್ನಿಲ್ಲ: ಗಾವಸ್ಕರ್ ಕೂದಲು ಕತ್ತರಿಸಿದ್ದ ʼಡಿಕ್ಕಿʼ
Next articleಏಕಾಏಕಿ ಭೀಮಾನದಿಗೆ ಪ್ರವಾಹ: 9 ಗ್ರಾಮಗಳಿಗೆ ನೀರು ನುಗ್ಗುವ ಭೀತಿ

LEAVE A REPLY

Please enter your comment!
Please enter your name here