ಕಲಬುರಗಿ: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕೇಂದ್ರ ಸರ್ಕಾರ ಸಂವಿಧಾನದ ಮಾನ್ಯತೆ ನೀಡಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಠಾಧೀಶರು ಒಕ್ಕೂರಲಿನಿಂದ ಒತ್ತಾಯಿಸಿದರು.
ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟಗಳು ನಡೆಯುತ್ತಿದ್ದು, ಈಗಾಗಲೇ ರಾಜ್ಯದ ಸಿಎಂ ಸಿದ್ದರಾಮಯ್ಯನವರು ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಈ ಶಿಫಾರಸ್ಸಿಗೆ ಸಮ್ಮತಿ ಸೂಚಿಸಿ ಸಂವಿಧಾನದ ಮಾನ್ಯತೆ ನೀಡಬೇಕು ಎಂದು ಮಠಾಧೀಶರ ಒಕ್ಕೂಟದ ಅಧ್ಯಕ್ಷರೂ ಆದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿಯ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಗದುಗಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿಗಳು, ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳು ಆಗ್ರಹಿಸಿದರು.
ಜೈನ್, ಸಿಖ್ಖ್ ಧರ್ಮದ ಮಾದರಿಯಲ್ಲಿ ನಮ್ಮ ಲಿಂಗಾಯತ ಧರ್ಮಕ್ಕೂ ಕೇಂದ್ರ ಸರ್ಕಾರ ಸಂವಿಧಾನದ ಮಾನ್ಯತೆ ನೀಡಬೇಕು. ಅಗತ್ಯವಾದರೆ ಪುನಃ ರಾಜ್ಯ ಸರ್ಕಾರದಿಂದ ಮರು ಪರಿಶೀಲನೆ ಶಿಫಾರಸ್ಸು ಕಳುಹಿಸಲಾಗುವುದು ಎಂದರು.
ಜಾತಿಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತವೆಂದು ಮತ್ತು ಉಪ ಜಾತಿ ಕಾಲಂನಲ್ಲಿ ನಿಮ್ಮ ಜಾತಿ ಹೆಸರು ನಮೂದಿಸಬೇಕೆಂದು ಈಗಾಗಲೇ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂದು ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಕುರಿತು ಗೊಂದಲದ ಬಗ್ಗೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಮಠಾಧೀಶರು ಉತ್ತರಿಸಿದರು.
ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಶಿವಾನಂದ ಮಹಾಸ್ವಾಮೀಜಿ, ಮುರುಘರಾಜೆಂದ್ರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಕುರಣೇಶ್ವರ ಸ್ವಾಮೀಜಿ. ಶಾಸಕ ಬಿ.ಆರ್. ಪಾಟೀಲ್, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಕಲಬುರಗಿ ಅಧ್ಯಕ್ಷ ಅರುಣಕಮಾರ ಪಾಟೀಲ್, ಶ್ರೀಶೈಲ್ ಘೂಳಿ ಇತರರಿದ್ದರು.
ರಾಜ್ಯದ 31 ಜಿಲ್ಲೆಗಳಲ್ಲಿ ಅಭಿಯಾನ: ಬಸವಣ್ಣನೆಂದರೆ ಕೇವಲ ಲಿಂಗಾಯತವಲ್ಲ, ಎಲ್ಲರೂ ಮತ್ತು ಎಲ್ಲಾ ಕಡೆ ಅವರ ತತ್ವ ಒಪ್ಪಿಕೊಳ್ಳಲಾಗುತ್ತಿದೆ. 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿ ಮಾದರಿಯಲ್ಲಿಯೇ ಬಸವ ಸಂಸ್ಕೃತಿ ಅಭಿಯಾನ ನಡೆಸಲಾಗುತ್ತಿದೆ. ಬಸವನಬಾಗೇವಾಡಿಯಿಂದ ಸೋಮವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮಂಗಳವಾರ ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನ ರಾಜ್ಯದ 31 ಜಿಲ್ಲೆಗಳಲ್ಲೂ ನಡೆಯಲಿದೆ ಎಂದು ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ತಲೆ ಮೇಲೆ ಪಾದ ಇಟ್ಟು ಪೂಜೆ ಮಾಡುವುದು ಅವಿವೇಕದ ಪರಮಾವಧಿ: ಸಾಂಸ್ಕೃತಿಕ ನಾಯಕ ಬಸವಣ್ಣನವರಗಿಂತ ದೊಡ್ಡವರು ಯಾರು ಇಲ್ಲ, ಕಲಬುರಗಿಯಲ್ಲಿ ಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರಿಗಿಂತ ದೊಡ್ಡವರು ನಮ್ಮ ಭಾಗದಲ್ಲಿ ಯಾರು ಇಲ್ಲ. ಹೀಗಿದ್ದರೂ ಅವರ ನಿಧನವಾದಾಗ ಅವರ ಮೇಲೆ ಪಾದ ಇಟ್ಟು ಪೂಜೆ ಮಾಡುವುದು ಸರಿಯೇ ಎಂದು ಆದರ್ಶ ನಗರದ ಕೆಸಿಇಟಿ ಶಾಲೆ ವಿದ್ಯಾರ್ಥಿನಿ ಸ್ನೇಹಾ ಪಾಟೀಲ್ ಕೇಳಿದ ಪ್ರಶ್ನೆಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಉತ್ತರ ನೀಡುತ್ತ, ಬಹುತೇಕ ಕಡೆಗಳಲ್ಲಿ ಸ್ಥಾವರ ಮತ್ತು ಜಂಗಮ ಸ್ವಾಮೀಜಿಗಳಿಗೆ ವಿವೇಕ ಕಡಿಮೆ ಇರುವುದರಿಂದ ಯಾರೇ ನಿಧನರಾದರೂ ಅವರ ತಲೆ ಮೇಲೆ ತಮ್ಮ ಪಾದ ಇಟ್ಟು ಆಶೀರ್ವಾದ ಮಾಡುತ್ತಾರೆ ಇದು ಅವಿವೇಕದ ಪರಮಾವಧಿ. ಇದನ್ನು ಯಾರೇ ಮಾಡಿದ್ದರೂ ವಿರೋಧ ಮಾಡಬೇಕು. ಬಸವಾಭಿಮಾನಿಗಳು ಸಂಪೂರ್ಣವಾಗಿ ವಿರೋಧಿಸಿ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು.