ಕಲಬುರಗಿ: ಕಲ್ಯಾಣ ಭಾಗದ ಕಲಬುರಗಿ, ರಾಯಚೂರು, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಪ್ರಭಾವ ಕಡಿಮೆಯಾದಂತೆ ಕಂಡು ಬಂದರೂ ವಿವಿಧ ಡ್ಯಾಂಗಳಿಂದ ನೀರು ಬಿಟ್ಟ ಪರಿಣಾಮವಾಗಿ ಗ್ರಾಮಗಳಲ್ಲಿ ಹರಿದು ಬಂದು ಎಲ್ಲೆಡೆ ಜಲಾವೃತವಾಗಿದೆ.
ಅಫಜಲಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರುನೂರ ಡ್ಯಾಂ ನಿಂದ ಹರಿದು ಬಂದಿರುವ ಅಪಾರ ನೀರಿನಿಂದಾಗಿ ತಾಲೂಕಿನ ಜೇವರ್ಗಿ(ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ಕೋಣೆಗಳೆಲ್ಲ ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಗುರುಗಳಾದ ಅಣ್ಣಾರಾವ ಪಾಟೀಲರು ಬಿಇಒ ಗಮನಕ್ಕೆ ತಂದು ಶುಕ್ರವಾರ ಶಾಲೆಗೆ ರಜೆ ಘೋಷಿಸಿದ್ದಾರೆ.
ಗ್ರಾಮದ ಶಾಲೆ ಪಕ್ಕದಲ್ಲಿ ಭೋರಿ ಹಳ್ಳ ಹರಿಯುತ್ತಿರುವದರಿಂದ ಹೆಚ್ಚಾದ ಮಳೆ ಹಾಗೂ ಭೋರಿ ಹಳ್ಳದ ನೀರು ನುಗ್ಗಿದ ಪರಿಣಾಮ ಶಾಲೆ ಸುತ್ತಲೂ ನೀರು ಆವರಿಸುತ್ತಿವೆ. ಈ ಕಾರಣದಿಂದ ಇದೇ ತಿಂಗಳಲ್ಲಿ ನಾಲ್ಕು ದಿನ ಶಾಲೆಗೆ ರಜೆ ನೀಡಿದಂತಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರನಲ್ಲಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಬೆಳೆಗಳು ಹಾಳಾಗಿವೆ. ಕೆಲ ಕಡೆ ರಸ್ತೆಗಳು ಕೊಚ್ಚಿಕೊಂಡಿವೆ. ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ.
ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ನಾಪತ್ತೆ: ಬೀದರ್ ತಾಲೂಕಿನ ಬರೂರ್ ಗ್ರಾಮದ ಬಳಿ ತುಂಬಿ ಹರಿದ ಸೇತುವೆ ನೀರಿನಲ್ಲಿ ಓರ್ವನು ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ.
ಸೆ. 18ರಂದು ಈ ಅವಾಂತರ ಸಂಭವಿಸಿದೆ. ಬರೂರ್ ಗ್ರಾಮದ 62 ವರ್ಷ ವಯಸ್ಸಿನ ಪ್ರಭಾಕರ್ ರೆಡ್ಡಿ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನ ಶೋಧ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆಲ ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಮಳೆ ಸುರಿದು ಕಡಿಮೆ ಎತ್ತರದ ಬಹಳಷ್ಟು ಸೇತುವೆಗಳು ನೀರಿನಲ್ಲಿ ಮುಳಗಿವೆ. ಎರಡು ದಿನಗಳಿಂದ ಮಳೆ ಬಿಡುವು ನೀಡಿದೆ.