ಶಿವಮೊಗ್ಗ ಪ್ರವಾಸಿಗರ ಗಮನಕ್ಕೆ: ಬಾಳೆಬರೆ ಘಾಟ್ ವಾಹನ ಸಂಚಾರ ನಿಷೇಧ

0
62

ಶಿವಮೊಗ್ಗ: ಭಾರೀ ಮಳೆ ಮತ್ತು ಭೂ ಕುಸಿತದ ಪರಿಣಾಮ ಬಾಳೆಬರೆ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸಹ ಸೂಚಿಸಲಾಗಿದೆ. ತೀರ್ಥಹಳ್ಳಿ-ಕುಂದಾಪುರ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹುಲಿಕಲ್ ಘಾಟ್ (ಬಾಳೆಬರೆ ಘಾಟ್‌)ನಲ್ಲಿ ಭಾರೀ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವ ತನಕ ನಿಷೇಧಿಸಿ ಆದೇಶವನ್ನು ಹೊರಡಿಸಿದ್ದಾರೆ.

ಆದೇಶದಲ್ಲಿ ಅವರು ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ ಸರಪಳಿ ಹೆರ್‌ಪಿನ್ ತಿರುವಿನಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮಳೆ ಚುರುಕುಗೊಂಡಿದ್ದು ಮತ್ತೆ ಮಣ್ಣು ಕುಸಿಯುವ ಸಂಭವವಿದೆ ಎಂದು ಹೇಳಿದ್ದಾರೆ.

ಆದ್ದರಿಂದ ಸುರಕ್ಷತಾ ದೃಷ್ಟಿಯಿಂದ (ಮಾಸ್ತಿಕಟ್ಟೆ-ಹೊಸಂಗಡಿ ತನಕ) ತಾತ್ಕಾಲಿಕವಾಗಿ ಮಳೆಗಾಲ ಮುಗಿಯುವವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು: ತೀರ್ಥಹಳ್ಳಿಯಿಂದ ರಾವೆ-ಕಾನಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮೂಲಕ ಸಂಚರಿಸುವುದು.

ನಗರ-ಸಿದ್ದಾಪುರ ರಾಜ್ಯ ಹೆದ್ದಾರಿ-278 ರಸ್ತೆ ತೀರ್ಥಹಳ್ಳಿಯಿಂದ ಯಡೂರು-ಸುಳಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮೂಲಕ ಸಂಚರಿಸುವುದು.

ಶಿವಮೊಗ್ಗ/ ಸಾಗರ ಕಡೆಯಿಂದ ಹೊಸನಗರ-ನಗರ-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ಮೂಲಕ ಕುಂದಾಪುರದ ಕಡೆ ಹೋಗುವ ಭಾರೀ ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ನಂತರ ಹೊನ್ನಾವರದಿಂದ ಭಟ್ಕಳ-ಬೈಂದೂರು- ಕುಂದಾಪುರ ರಸ್ತೆಯ ಮೂಲಕ ಸಂಚರಿಸುವಂತೆ ಆದೇಶಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹುಲಿಕಲ್ ಸಹ ಒಂದಾಗಿದೆ. ಮಳೆಗಾಲದಲ್ಲಿ ಕೆಲವು ವರ್ಷ ಆಗುಂಬೆಗಿಂತ ಅಧಿಕ ಮಳೆ ಹುಲಿಕಲ್‌ನಲ್ಲಿ ಸುರಿಯುತ್ತದೆ.

ಹುಲಿಕಲ್ ಘಾಟ್‌ನಲ್ಲಿ ಶ್ರೀ ಚಂಡಿಕಾಂಬಾ ದೇವಾಲಯದ ಬಳಿ ದೊಡ್ಡ ತಿರುವು ಇದೆ. ಈ ತಿರುವಿನಲ್ಲಿ ಎರಡು ದಿನಗಳ ಹಿಂದೆ ಮತ್ತೆ ಭೂ ಕುಸಿತ ಉಂಟಾಗಿತ್ತು. ಆಗಲೇ ಘಾಟ್‌ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ಬಂದ್ ಆಗುವ ಸೂಚನೆ ಸಿಕ್ಕಿತ್ತು.

ಶಿವಮೊಗ್ಗ-ಕರಾವಳಿ ಭಾಗದ ಸಂಪರ್ಕಕೊಂಡಿ ಈ ರಸ್ತೆ. ಒಂದು ತಿಂಗಳಿನಿಂದ ಈ ರಸ್ತೆಯಲ್ಲಿ ಭೂ ಕುಸಿತವಾಗುತ್ತಲೇ ಇದೆ. ದೊಡ್ಡ ಹೆರ್‌ಪಿನ್ ತಿರುವು ಇರುವ ಕೆಳಭಾಗದಲ್ಲಿ 50 ರಿಂದ 60 ಅಡಿ ದೂರದಲ್ಲಿ ಗುಡ್ಡ ಕುಸಿದಿತ್ತು.

ಪದೇ ಪದೇ ಮಣ್ಣು ಕುಸಿಯುತ್ತಿರುವ ಕಾರಣ ಲೋಕೋಪಯೋಗಿ ಇಲಾಖೆ ಘಾಟ್‌ನಲ್ಲಿ ಭಾರೀ ವಾಹನ ನಿಷೇಧಿಸಬೇಕು ಎಂದು ಉಡುಪಿ, ಶಿವಮೊಗ್ಗ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು.

ಪೆಟ್ರೋಲಿಯಂ ಉತ್ಪನ್ನ, ಸರಕು ಸಾಗಣೆ ಮಾಡುವ ದೊಡ್ಡ ದೊಡ್ಡ ವಾಹನಗಳು ಆಗುಂಬೆ ಘಾಟ್ ಮೂಲಕ ಕರಾವಳಿ ಪ್ರವೇಶ ಮಾಡುವುದು ಅಸಾಧ್ಯ. ಅಂತಹ ವಾಹನಗಳು ಬಾಳೆಬರೆ ಅಥವ ಹುಲಿಕಲ್ ಘಾಟ್ ಮೂಲಕ ಸಂಚಾರವನ್ನು ನಡೆಸುತ್ತವೆ.

ಶ್ರೀ ಚಂಡಿಕಾಂಬಾ ದೇವಾಲಯದ ಬಳಿ ಕಾಂಕ್ರೀಟ್ ರಸ್ತೆ ಹಾಗೆಯೇ ಇದೆ. ಆದರೆ ರಸ್ತೆಯ ಅಡಿ ಭಾಗದಲ್ಲಿ ಮಣ್ಣು ಕುಸಿತವಾಗಿದೆ. ಆದ್ದರಿಂದ ಭಾರೀ ವಾಹನ ಸಂಚಾರ ನಿಷೇಧಿಸುವ ಕುರಿತು ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಪ್ರಸ್ತಾವನೆಯಲ್ಲಿ ಮನವಿ ಮಾಡಿತ್ತು.

Previous articleಭಾರತ-ರಷ್ಯಾ ಸ್ನೇಹ ಸರ್ವಕಾಲಕ್ಕೂ ಭದ್ರ
Next articleGovernment Employee: ಸರ್ಕಾರಿ ನೌಕರರಿಗೆ ಲೋಕಾಯುಕ್ತರ ಕಿವಿಮಾತುಗಳು

LEAVE A REPLY

Please enter your comment!
Please enter your name here