ಪ್ರಜ್ವಲ್ ರೇವಣ್ಣ. ಜೆಡಿಎಸ್ ನಾಯಕ, ಹಾಸನ ಕ್ಷೇತ್ರದ ಮಾಜಿ ಸಂಸದ. ಕೋಟ್ಯಾಂತರ ರೂಪಾಯಿ ಆಸ್ತಿ ಒಡೆಯ ಈಗ ಜೈಲು ಹಕ್ಕಿ. ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯ ವಾಸ.
ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೆಲಸ ಮಾಡಬೇಕಿದೆ. ಅದಕ್ಕೆ ಅವರಿಗೆ ಸಂಬಳವೂ ದೊರೆಯುತ್ತದೆ.
ಪ್ರಜ್ವಲ್ ರೇವಣ್ಣ ಈಗ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಲೈಬ್ರರಿಯ ಕ್ಲರ್ಕ್. ಅವರಿಗೆ ದಿನಕ್ಕೆ ಸಿಗುವ ವೇತನ 522 ರೂ.. ಈ ಕುರಿತು ಎಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದು, “ಅದರ ಬಗ್ಗೆ ಇವತ್ಯಾಕೆ ರಿಯಾಕ್ಟ್ ಮಾಡ್ಲಿ. ಅದೆಲ್ಲಾ ಆಗುತ್ತೆ ಬಿಡಿ, ಅದನ್ನು ಅವರು ಮಾಡ್ತಾರೆ” ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಕೆಲಸ: ಬೆಂಗಳೂರು ನಗರದ ಜನಪ್ರತಿನಿಧಿಗಳ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಈಗ ಆರೋಪಿಯಲ್ಲ ಅಪರಾಧಿ. ಆದ್ದರಿಂದ ಜೈಲಿನ ನಿಯಮದಂತೆ ಅವರು ಕೆಲಸ ಮಾಡಬೇಕಿದೆ, ಅದಕ್ಕೆ ಸಂಬಳ ಸಿಗುತ್ತದೆ.
ಪ್ರಜ್ವಲ್ ರೇವಣ್ಣರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳು ಗ್ರಂಥಾಲಯ ಗುಮಾಸ್ತನಾಗಿ ನೇಮಿಸಿದ್ದಾರೆ. ಇದಕ್ಕಾಗಿ ದಿನಕ್ಕೆ 522 ರೂ. ಸಂಬಳ ನೀಡಲಾಗುತ್ತದೆ. ಅವರು ಕೈದಿಗಳಿಗೆ ಪುಸ್ತಕಗಳನ್ನು ನೀಡುವುದು, ನೋಂದಣಿ ಮಾಡಿಕೊಳ್ಳುವದು ಮತ್ತು ಎರವಲು ಪಡೆದ ದಾಖಲೆಗಳನ್ನು ನಿರ್ವಹಿಸಬೇಕಿದೆ.
ವಾರದಲ್ಲಿ ಇಂತಿಷ್ಟು ದಿನ ಎಂದು ಪ್ರಜ್ವಲ್ ರೇವಣ್ಣ ಕೆಲಸ ಮಾಡಬೇಕಿದೆ. ಪ್ರತಿದಿನದ ಕೆಲಸಕ್ಕೆ ಅವರು 522 ರೂ. ವೇತನ ಪಡೆಯುತ್ತಾರೆ. ಸಾಮಾನ್ಯವಾಗಿ ಕೈದಿಗಳು ತಿಂಗಳಿಗೆ ಕನಿಷ್ಠ 12 ದಿನಗಳಾದರೂ ಕೆಲಸ ಮಾಡಬೇಕು. ವಾರದಲ್ಲಿ ಮೂರು ದಿನ ಕೆಲಸ ಇರುತ್ತದೆ ಎಂದು ಜೈಲಿನ ಅಧಿಕಾರಿಗಳು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಸದ್ಯ ಇನ್ನೊಂದು ಪ್ರಕರಣದ ವಿಚಾರಣೆ, ಹೇಳಿಕೆಗಾಗಿ ಪ್ರಜ್ವಲ್ ರೇವಣ್ಣ ಕೋರ್ಟ್‌ಗೆ ಹೋಗಿಬರುವ, ವಕೀಲರನ್ನು ಭೇಟಿ ಮಾಡುವ ಕೆಲಸವೂ ಇರುವ ಕಾರಣ. ಜೈಲಿನ ಕೆಲಸದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
ಮನೆಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆಗಸ್ಟ್ 2ರಂದುರಂದು ಜನಪ್ರತಿನಿಧಿಗಳ ನ್ಯಾಯಾಲಯವು ಪ್ರಜ್ವಲ್ ರೇವಣ್ಣಗೆ ಅಪರಾಧಿ ಎಂದು ಘೋಷಣೆ ಮಾಡಿ, ಶಿಕ್ಷೆ ಪ್ರಕಟಿಸಿತ್ತು. ಆದ್ದರಿಂದ ಒಂದು ವರ್ಷದಿಂದ ವಿಚಾರಣಾ ಕೈದಿಯಾಗಿದ್ದ ಪ್ರಜ್ವಲ್ ಈಗ ಅಪರಾಧಿ.
ಅಪರಾಧಿಯಾಗಿ ಕೈದಿಯಾದ ಪ್ರಜ್ವಲ್ ರೇವಣ್ಣ ಜೈಲು ನಿಯಮಗಳ ಪ್ರಕಾರ ಕೆಲಸ ಮಾಡಬೇಕಿದೆ. ಅದರಲ್ಲೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾರಣ ಜೈಲಿನಲ್ಲಿ ಇರುವ ತನಕ ಕಡ್ಡಾಯವಾಗಿ ಕೆಲಸ ಮಾಡಬೇಕು. ಯಾವ ಕೆಲಸವನ್ನು ಮಾಡಬೇಕು ಎಂಬ ಆಯ್ಕೆ ಅವರಿಗೆ ಬಿಟ್ಟಿದ್ದು, ಅದಕ್ಕೆ ವೇತನ ದೊರೆಯಲಿದೆ.