ಹಾಸನ: ಭೀಕರ ರಸ್ತೆ ಅಪಘಾತದ ಬಳಿಕ ಹಂಪ್ ನಿರ್ಮಾಣ

0
43

ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಶುಕ್ರವಾರ ಸಂಭವಿಸಿದ ಲಾರಿ ಅಪಘಾತದಲ್ಲಿ 10 ಜನರು ಮೃತಪಟ್ಟಿದ್ದಾರೆ. ಈ ಕ್ಯಾಂಟರ್ ಅವಘಡ ಬಳಿಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಹಂಪ್ ನಿರ್ಮಾಣ ಮಾಡಲಾಗಿದೆ.

ಶನಿವಾರ ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದರು. ಆಗ ಸ್ಥಳೀಯರು ಹಂಪ್ಸ್ ನಿರ್ಮಿಸಿದರೆ ವಾಹನಗಳ ವೇಗದ ಮಿತಿ‌ ನಿಯಂತ್ರಿಸಬಹುದೆಂದು ಮನವಿ ಸಲ್ಲಿಸಿದ್ದರು.

ಸಚಿವರು ಈ ಕುರಿತು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆಗಳನ್ನು ನೀಡಿದ್ದರು. ಆದ್ದರಿಂದ ಭಾನುವಾರ ಈ ರಸ್ತೆಯಲ್ಲಿ ಹಂಪ್ಸ್ ಹಾಕಲಾಗಿದೆ. ಕಾಮಗಾರಿ ಸ್ಥಳಕ್ ಹಾಸನ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು.

10 ಜನರ ಸಾವು: ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ಉತ್ಸವ ಮೆರವಣಿಗೆ ವೇಳೆ ವೇಗವಾಗಿ ಬಂದ ಲಾರಿ ಮೆರವಣಿಗೆ ಮೇಲೆ ನುಗ್ಗಿತ್ತು. ಈ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ.

ಅವಘಡದಲ್ಲಿ ಗಾಯಗೊಂಡವರು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಾಖಲಾಗಿದ್ದು ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳಯಗಳ ಆರೋಗ್ಯ ವಿಚಾರಿಸಿದ್ದಾರೆ’ ಎಂದು ಹೇಳಿದ್ದಾರೆ.

ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸಂಸದರು, ‘ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ಎಂಟು ಯುವಕರನ್ನು ಕಳೆದುಕೊಂಡಿದ್ದೇವೆ ಎಂಬ ಸುದ್ದಿ ಮನಸ್ಸಿಗೆ ತುಂಬಾ ಭಾರವಾಗಿದೆ. ಇನ್ನೂ ಬದುಕಿನ ಪಯಣವನ್ನು ಪ್ರಾರಂಭಿಸಬೇಕಿದ್ದ, ಕನಸುಗಳ ದಾರಿಯಲ್ಲಿ ಹೆಜ್ಜೆ ಹಾಕಬೇಕಿದ್ದ ಯುವಕರ ಜೀವಗಳು ಕ್ಷಣಾರ್ಧದಲ್ಲಿ ಕಳೆದುಹೋಗಿರುವುದು ಎಂತಹ ದುಃಖ!’ ಎಂದು ಹೇಳಿದ್ದರು.

‘ತಮ್ಮ ಮಕ್ಕಳನ್ನು ಕನಸುಗಳೊಂದಿಗೆ ಬೆಳೆಸಿದ ಪೋಷಕರ ಹೃದಯದ ನೋವಿಗೆ ಶಬ್ದಗಳಿಲ್ಲ. ಈ ಅನಾಹುತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಗಳಿಗೆ ಶಾಂತಿ ಸಿಗಲಿ, ದುಃಖಿತರಾದ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೇಗ ಗುಣಮುಖರಾಗಲಿ, ಕರಾಳ ನೆನಪಿನಿಂದ ಹೊರಬರುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಎಂದು ಸಂತಾಪ ಸೂಚಿಸಿದ್ದರು.

ಸರ್ಕಾರದಿಂದ ಪರಿಹಾರ; ಹಾಸನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಪರಿಹಾರ ವಿತರಣೆ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಅಪಘಾತ ಸಂದರ್ಭದಲ್ಲಿ ಮೃತರ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡುವುದು ಸಾವಿನ ನಷ್ಟಕ್ಕೆ ಸಮಾನ ಎಂದಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು, ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ಆರಂಭಿಕ ದಿನಗಳಲ್ಲಿ ಆರ್ಥಿಕ ಸಂಕಷ್ಟಗಳು ಬಾಧಿಸದಿರಲಿ ಎಂಬ ಉದ್ದೇಶದಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರ ರಸ್ತೆ ಸುರಕ್ಷತಾ ಕಾನೂನುಗಳನ್ನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ? ಹಾಸನ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ, ಸಂತೈಸಿ, ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ. ಮೃತರ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಪರಿಹಾರ ನೀಡಲಾಗುತ್ತಿದೆ. ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

Previous articleಅಕ್ರಮದ ಕೂಪವಾಗಿರುವ ರಾಜ್ಯದ ಬಹುತೇಕ ಜೈಲುಗಳು!
Next articleಬೆಂಗಳೂರು  ರಸ್ತೆ ಗುಂಡಿ ದುಸ್ಥಿತಿ: ಶಾಲಾ ಮಕ್ಕಳಿಂದ ಪ್ರಧಾನಿ ಕಚೇರಿಗೆ ಪತ್ರ

LEAVE A REPLY

Please enter your comment!
Please enter your name here