Home ನಮ್ಮ ಜಿಲ್ಲೆ ಗದಗ ತಹಶೀಲ್ದಾರ್ ಕೊಲೆಗೆ ಯತ್ನಿಸಿದ್ದ ಆರೋಪಿಗಳಿಬ್ಬರ ಬಂಧನ

ತಹಶೀಲ್ದಾರ್ ಕೊಲೆಗೆ ಯತ್ನಿಸಿದ್ದ ಆರೋಪಿಗಳಿಬ್ಬರ ಬಂಧನ

0
19

ಗದಗ(ರೋಣ): ರೋಣ ತಹಶೀಲ್ದಾರ್‌ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಕೆ ಎನ್ನುವವರ ಮೇಲೆ ಆರೋಪಿಗಳಿಬ್ಬರು ಭಾನುವಾರ ತಡರಾತ್ರಿ ಕೊಲೆಗೆ ಯತ್ನಿಸಿದ್ದು. ಸಕಾಲದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರಾತ್ರಿ ಪಿಡಬ್ಲುಡಿ ಪ್ರವಾಸಿ ಮಂದಿರದ ಆವರಣದಲ್ಲಿರುವ ತಹಶೀಲ್ದಾರ್ ವಾಸ ಮಾಡುವ ಮನೆಗೆ ನುಗ್ಗಿದ ಆರೋಪಿಗಳು ತಹಶೀಲ್ದಾರ್ ನಾಗರಾಜ ಕೆ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ತಹಶೀಲ್ದಾರ್ ನಾಗರಾಜ ಕೆ ರವರು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗಳಾದ ಪಟ್ಟಣದ ಹನುಮಂತ ಚಲವಾದಿ ಹಾಗೂ ಶರಣಪ್ಪ ಗದಗಿನ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹನುಮಂತ ಚಲವಾದಿ ಮೇಲೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಆರೋಪಿ ಆಗಾಗ ತಹಶೀಲ್ದಾರ್ ಕಚೇರಿಗೆ ತೆರಳಿ ತನ್ನ ಮೇಲೆ ಇರುವ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದನು ಎನ್ನಲಾಗಿದ್ದು, ಪ್ರಕರಣ ಖುಲಾಸೆಗೊಳಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ತಹಶೀಲ್ದಾರ್ ನಾಗರಾಜರವರಿಗೆ ಧಮಕಿ ಕೂಡ ಹಾಕಿದ್ದು ಪ್ರಕರಣದಲ್ಲಿ ತಿಳಿದು ಬಂದಿದೆ.

ತಹಶೀಲ್ದಾರ್‌ ನಾಗರಾಜರವರು ತಮ್ಮ ಕರ್ತವ್ಯ ನಿಭಾಯಿಸಿದ್ದು, ಇದನ್ನು ಸಹಿಸದ ಆರೋಪಿಗಳು ಭಾನುವಾರ ತಡರಾತ್ರಿ ತಹಶೀಲ್ದಾರ್ ನಿವಾಸಕ್ಕೆ ತೆರಳಿ ಕತ್ತು ಹಿಸುಕಿ ಅವರ ಕೊಲೆಗೆ ಯತ್ನಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.‌