ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿರುವ ಉತ್ಖನನ ಎರಡನೇ ದಿನ ಪ್ರಾಚೀನ ಕಾಲದ ಶಿವಲಿಂಗದ ತುಣುಕು ಪತ್ತೆಯಾಗಿದೆ.
ಶಿವಲಿಂಗದ ಪಾಣಿಪೀಠದ ತುಂಡು ಆಗಿರಬಹುದೆಂದು ಅಂದಾಜಿಸಲಾಗಿದೆ. ತಕ್ಷಣ ಕಾರ್ಮಿಕರು ಮೆಲ್ಲಗೆ ಮಣ್ಣಿನಿಂದ ಹೊರ ತೆಗೆದರು. ಆಳದಲ್ಲಿ ದೇವಾಲಯಗಳು, ಅವಶೇಷಗಳು ದೊರೆಯಬಹುದೆಂದು ಊಹಿಸಲಾಗಿದೆ.
ಉತ್ಖನನದಲ್ಲಿ ಪ್ರಾಚೀನ ದೇವಾಲಯಗಳು, ನಿಧಿ ಪತ್ತೆಯಾದಲ್ಲಿ ಏಕಾಏಕಿ ಗ್ರಾಮ ಸ್ಥಳಾಂತರ ನಿರ್ಣಯ ಅಂಗೀಕರಿಸಿದಲ್ಲಿ ಗ್ರಾಮಸ್ಥರೆಲ್ಲ ಎಲ್ಲಿ ಹೋಗುವುದು ಎಂಬ ಆತಂಕ ಅವರನ್ನು ಕಾಡುತ್ತಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸಲು ಸರ್ಕಾರ ಗ್ರೀನ್ ಸಿಗ್ನಲ್
ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಾಲಯದ ಜಾತ್ರೆ ಮಾರ್ಚ್‌ನಲ್ಲಿ ನಡೆಯಲಿದೆ. ಆದರೆ ಈಗ ವೀರಭದ್ರೇಶ್ವರ ದೇವಾಲಯದ ಅಗ್ನಿಕುಂಡದ ಜಾಗದಲ್ಲಿಯೇ ಉತ್ಖನನ ಪ್ರಾರಂಭವಾಗಿದೆ. ಐವತ್ತು ವರ್ಷಗಳಿಂದ ವೀರಭದ್ರೇಶ್ವರ ದೇವಾಲಯ ಜಾತ್ರೆ ನಡೆಯುತ್ತಾ ಬಂದಿದೆ. ಆದರೆ ಈ ಬಗ್ಗೆ ಈಗ ಅನುಮಾನಗಳು ಶುರುವಾಗಿವೆ.
ಪ್ರತಿ ಮಳೆಗಾಲದಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಚಿನ್ನಾಭರಣಗಳು, ಅಮೂಲ್ಯ ಹರಳುಗಳು, ರತ್ನಗಳು ದೊರೆಯುತ್ತಿರುವದು ಸಾಮಾನ್ಯ. ಉತ್ಖನನ ನಡೆಸಿರುವ ಸ್ಥಳಕ್ಕೆ ಗ್ರಾಮಸ್ಥರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಎರಡು ನೂರು ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿ ಆದೇಶಿಸಿದ್ದಾರೆ. ಫೋಟೋಗ್ರಾಫಿ, ವಿಡೀಯೋಗ್ರಾಫಿ ನಿಷೇಧಿಸಲಾಗಿದೆ.






















