ಗದಗ: ಕಂದಾಯ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಗ್ರಾಮ ಲೆಕ್ಕಾಧಿಕಾರಿಯೋರ್ವ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾನೆ.
ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಲೆಕ್ಕಾಧಿಕಾರಿ ಯೋಗೇಶ ಕುರಹಟ್ಟಿ ದಯಾಮರಣ ಕೋರಿದವ ಎಂದು ಗುರುತಿಸಲಾಗಿದೆ. ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಿರಿಯ ಅಧಿಕಾರಿಗಳು ವಿನಾಕಾರಣ ಕಳೆದೆರಡು ತಿಂಗಳುಗಳಿಂದ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದಾಗಿ ಮನೆಯಲ್ಲಿನ ವೃದ್ಧ ತಾಯಿಯ ಆರೋಗ್ಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಯಾಮರಣ ನೀಡುವಂತೆ ಮನವಿ ಮಾಡಿದ್ದಾನೆ.
ಇದನ್ನೂ ಓದಿ: 8 ತಿಂಗಳ ಹಿಂದಷ್ಟೆ ಇಂಗ್ಲೆಂಡ್ ಕನ್ಯೆಯನ್ನು ವರಿಸಿದ್ದ ಮುರುಳಿ ಇನ್ನಿಲ್ಲ
ಇಲಾಖೆಯ ಸಂಯೋಜನೆಯ ಆ್ಯಪ್, ಪೋತಿ ಆಂದೋಲನ, ಬೆಳೆ ಕಟಾವು, ಪಹಣಿಗೆ ಆಧಾರ ಜೋಡಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೂ ತಮಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ತಮ್ಮನ್ನು ಇಲಾಖೆಯ ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಟಾರ್ಗೇಟ್ ಮಾಡಿದ್ದಾರೆ ಎಂದಿದ್ದಾರೆ.
ವಿನಾಕಾರಣ ತಮಗೆ ನೊಟೀಸ್ ನೀಡಲಾಗುತ್ತಿದೆ. ಮಾಸಿಕ ಡೈರಿ ನೀಡಿಲ್ಲವೆಂದು ಆರೋಪಿಸಿ ವೇತನ ತಡೆಯಲಾಗಿದೆ. ಈ ಹಿಂದೆಯೂ ಅನೇಕ ವೇತನ ತಡೆಹಿಡಿಯಲಾಗಿತ್ತು. ಇದರಿಂದಾಗಿ ತಮಗೆ ಹಾಗೂ ತಮ್ಮ ತಾಯಿಯ ಆರೋಗ್ಯ ರಕ್ಷಣೆಗೆ ಹಣ ಹೊಂದಿಸಲಾಗುತ್ತಿಲ್ಲ ಎಂದು ಮುಂಡರಗಿ ತಹಶೀಲ್ದಾರ್ ಮೂಲಕ ಸಲ್ಲಿಸಿರುವ ದಯಾಮರಣ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾನೆ.






















