ಗದಗ(ಲಕ್ಷ್ಮೇಶ್ವರ): ಸಾಮಾನ್ಯ ಜನರ ಅಸಮಾನ್ಯ ಕೆಲಸಗಳನ್ನು ದೇಶದ ಜನರಿಗೆ ಮನ್ ಕೀ ಬಾತ್ ಮೂಲಕ ತಿಳಿಸಿ ಜನರನ್ನು ಕಟ್ಟಿಕೊಂಡು ಜನರಿಂದಲೇ ಈ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಇದನ್ನು ನೋಡಿ ನಾವು ನಮ್ಮೂರಿನಲ್ಲಿ ಹೊಸದೇನನ್ನಾದರೂ ಆದರ್ಶವಾದ ಯೋಜನೆ ಹಾಕಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಏರ್ಪಡಿಸಿದ ಪ್ರಧಾನ ಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿ ನಂತರ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಇದೊಂದು ವಿಶೇಷವಾಗಿರುವ ಕಾರ್ಯಕ್ರಮ. ಹಿಂದಿನ ಯಾವುದೇ ಪ್ರಧಾನಿ ಮಾಡದಿರುವ ಜನರ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡು ಇಡೀ ದೇಶದಲ್ಲಿ ಆಗುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ದೇಶಕ್ಕೆ ತಿಳಿಸಿ ಅವುಗಳಿಂದ ಪ್ರೇರಣೆ ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಒಂದು ತಿಂಗಳಲ್ಲಿ ದೇಶದಲ್ಲಿ ಯಾವ ಒಳ್ಳೆಯ ಕಾರ್ಯಕ್ರಮ ನಡೆದಿವೆ ಅವುಗಳನ್ನು ಕೋಡಿಕರಿಸಿ ತಿಂಗಳ ಕೊನೆಯಲ್ಲಿ ಹೇಳುತ್ತಾರೆ. ಕರ್ನಾಟಕ, ಜಮು ಕಾಶ್ಮೀರ, ಮಣಿಪುರ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಸಾಮಾನ್ಯರು ಮಾಡಿರುವ ಅಸಮಾನ್ಯ ಸಾಧನೆಗಳನ್ನು ಹೇಳುತ್ತಾರೆ.
ದುಬೈನಲ್ಲಿ ಕನ್ನಡ ಶಾಲೆ ತೆರೆದಿರುವುದು, ಮಣಿಪುರದಲ್ಲಿ ವಿದ್ಯುತ್ ಇಲ್ಲದಿರುವಾಗ ಸೋಲಾರ್ ಬಳಕೆ ಮೂಲಕ ವಿದ್ಯುತ್ ಸಂಪರ್ಕ ಪಡೆದು ವಿದ್ಯೆ ಪಡೆದಿರುವುದು. ದೇಶದ ಎಲ್ಲರನ್ನು ಈ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ಜನರಿಗೆ ಬಹಳ ಲಾಭವಾಗಿದೆ. ಪ್ರೇರಣೆ ಸಿಕ್ಕಿದೆ. ಉದಾಹರಣೆಗೆ ಎಫ್‌ಪಿಒ ಹುಟ್ಟಿದ್ದೇ ಇದರ ಮೂಲಕ ಕೆಲವು ರೈತರು ಒಟ್ಟಿಗೆ ಸೇರಿ ಒಂದು ಸಂಸ್ಥೆ ಕಟ್ಟಿಕೊಂಡು ದಲ್ಲಾಳಿಗಳನ್ನು ದೂರ ಮಾಡಿ ರೈತರೇ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದರು. ಅದನ್ನು ಮನ್ ಕೀ ಬಾತ್ನಲ್ಲಿ ಪ್ರಧಾನಿ ಹೇಳಿದ್ದರು. ಅದನ್ನೇ ಪ್ರೇರಣೆಯಾಗಿ ಪಡೆದುಕೊಂಡು ದೇಶದಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ತೆರೆಯಲು ಆಂಭಿಸಿದರು. ಅದೇ ರೀತಿ ಸೂರಣಗಿಯಲ್ಲಿ ರೈತ ಉತ್ಪಾದಕ ಸಂಸ್ಥೆ ಆರಂಭಿಸಿ ಮೂರುವರೆ ಕೋಟಿ ರೂ. ವಹಿವಾಟು ಮಾಡುತ್ತಿದ್ದಾರೆ. ಇದನ್ನು ಯಾರೂ ಕಲ್ಪನೆ ಮಾಡಿರಲಿಲ್ಲ. ರಾಯಚೂರಿನಲ್ಲಿ ಸುಮಾರು ಇನ್ನೂರು ಕೋಟಿ ರೂ. ವಹಿವಾಟು ಮಾಡುತ್ತಾರೆ. ಇಂತಹ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ರೈತರಿಗೆ ಹೆಚ್ಚಿನ ಲಾಭ ಬರುವಂತಾಗಬೇಕು. ಇದೇ ರೀತಿ ಹೆಣ್ಣು ಮಕ್ಕಳ ಸಾಧನೆ, ರೈತರ ಸಾಧನೆಗಳನ್ನು ಮನ್‌ಕಿ ಬಾತ್‌ನಲ್ಲಿ ಹೇಳಿದ್ದಾರೆ ಎಂದರು.
ಈ ಊರಲ್ಲಿ ಎಫ್‌ಪಿಒ ಬರುವ ಮೊದಲು ಮಣ್ಣು ಪರೀಕ್ಷೆ ಮಾಡಲು ಹುಲಕೋಟಿಗೆ ಹೋಗಬೇಕಿತ್ತು. ಈಗ ಇಲ್ಲಿಯೇ ಮಣ್ಣು ಪರೀಕ್ಷಾ ಕೇಂದ್ರ ಇದೆ. ನೀರಿನ ಪರೀಕ್ಷೆಯೂ ಇಲ್ಲಿಯೇ ಇದೆ. ಒಂದು ಸಣ್ಣ ಸಂಸ್ಥೆ ಎಷ್ಟು ದೊಡ್ಡ ಕೆಲಸ ಮಾಡುತ್ತಿದೆ. ನಿರಂತರವಾಗಿ ಮನ್ ಕೀ ಬಾತ್ ಕೇಳುತ್ತಿದ್ದರೆ ಹೊಸ ವಿಚಾರಗಳು ಬರುತ್ತವೆ. ಇದೇ ಪ್ರಧಾನಿಯವರ ಉದ್ದೇಶ, ಅದೇ ವಿಕಸಿತ ಭಾರತ ಉದ್ದೇಶ. ಈಗ ಭಾರತ ಆರ್ಥಿಕವಾಗಿ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ. ಜನರ ದುಡಿಮೆಯಿಂದ ದೇಶ ಬೆಳೆಯುತ್ತದೆ. ರೈತರು ಕೂಲಿ ಕಾರ್ಮಿಕರಿಂದ ದೇಶದ ಉತ್ಪಾದನೆ ಹೆಚ್ಚಾಗುತ್ತದೆ. ನಾನು ಸಿಎಂ ಆಗಿ ನೂರು ಕೋಟಿ ರೂ. ಬಿಡುಗಡೆ ಮಾಡಿದರೆ ಅದರಿಂದ ಬದಲಾವಣೆಯಾಗುವುದಿಲ್ಲ. ಆ ಹಣದಿಂದ ಕಾರ್ಮಿಕ ರಸ್ತೆಗೆ ಡಾಂಬರ್ ಹಾಕಿದಾಗ ಆ ರಸ್ತೆಯಲ್ಲಿ ವಾಹನ ಓಡಾಟ ಮಾಡಿದಾಗ ಆರ್ಥಿಕತೆ ಬೆಳೆಯುತ್ತದೆ. ಅಂತಹ ಎಲ್ಲ ಕೆಲಸಗಳಿಗೆ ಸ್ಫೂರ್ತಿಯಾಗಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ ಎಂದರು.
ಒಳ್ಳೆಯ ಕೆಲಸ ನಿಲ್ಲಿಸಬಾರದು: ಜನರನ್ನು ಕಟ್ಟಿಕೊಂಡು ಜನರಿಂದಲೇ ಈ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಇದನ್ನು ನೋಡಿ ನಾವು ನಮ್ಮೂರಿನಲ್ಲಿ ಹೊಸದೇನನ್ನಾದರೂ ಆದರ್ಶವಾದ ಯೋಜನೆ ಹಾಕಿಕೊಳ್ಳಬೇಕು. ಅದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ನಮ್ಮ ಸರ್ಕಾರವಿದ್ದಾಗ ಎಫ್ ಪಿಒಗಳಿಗೆ ನಾಲ್ಕು ಐದು ಲಕ್ಷ ಸಹಾಯ ಧನ ನೀಡುತ್ತಿತ್ತು. ಈ ಸರ್ಕಾರ ಅದನ್ನು ನಿಲ್ಲಿಸಿದೆ. ಪ್ರಗತಿಪರವಾದ ಯಾವುದೇ ಕೆಲಸವನ್ನು ನಿಲ್ಲಿಸುವ ಕೆಲಸವನ್ನು ಮಾಡಬಾರದು, ಜನರಿಗೆ ಒಳ್ಳೆಯದಾಗುವುದನ್ನು ನಿಲ್ಲಿಸಿದರೆ ಜನರಿಗೆ ಅನ್ಯಾಯವಾಗುತ್ತದೆ. ನಾನು ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೆ. ಡಿಸೇಲ್ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ಹಿಂದೆ ಎಸ್.ಎಂ. ಕೃಷ್ಣಾ ಸಿಎಂ ಆಗಿದ್ದಾಗ ಅವರು ರೈತರಿಗಾಗಿ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದರು. ಅದನ್ನು ಮುಂದಿನ ಸರ್ಕಾರ ನಿಲ್ಲಿಸಿತ್ತು. ನಾನು ಸಹಕಾರ ಸಚಿವ ಇದ್ದಾಗ ಸಹಕಾರಿಗಳು ಬಂದು ಯಶಸ್ವಿನಿ ಯೋಜನೆ ಜಾರಿಗೆ ಆಗ್ರಹಿಸಿದ್ದರು. ನಾನು ಸಿಎಂ ಆಗಿದ್ದಾಗ ಅದನ್ನು ಮತ್ತೆ ಆರಂಭಿಸಿದೆ. 300 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಇವತ್ತಿನ ಸರ್ಕಾರ ಹಿಂದಿನ ಸರ್ಕಾರದ ಒಳ್ಳೆಯ ಯೋಜನೆಗಳನ್ನು ನಿಲ್ಲಿಸುವ ಕೆಲಸ ಮಾಡುತ್ತಿದೆ. ಕೆ ಶಿಪ್ ಯೋಜನೆ ನಮ್ಮ ಕಾಲದಲ್ಲಿ ಆರಂಭವಾಗಿತ್ತು. ಅದನ್ನು ನಿಲ್ಲಿಸಿ ಈಗ ಆರಂಭಿಸಿದ್ದಾರೆ. ಜನರ ಪರವಾಗಿರುವ ಕೆಲಸ ಆಗಬೇಕು ಅದೇ ಪ್ರಜಾರ್ಪಭುತ್ವದ ಗೆಲುವಾಗುತ್ತದೆ ಎಂದರು.
ತನಿಖೆಗೆ ಸೂಚನೆ: ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳು ಗೋಲ್‌ಮಾಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ. ನಾನು ಮುಖ್ಯಮಂತಿ ಇದ್ದಾಗ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಪರಿಹಾರ ನೀಡಿದ್ದೇ. ಒಣ ಬೇಸಾಯಕ್ಕೆ ನಾನು 12,500 ರೂ. ಕೊಟ್ಟಿದ್ದೆ. ನೀರಾವರಿಗೆ 25 ಸಾವಿರ. ತೋಟಗಾರಿಕೆಗೆ 28 ಸಾವಿರ ರೂ. ಪರಿಹಾರ ನೀಡಿದ್ದೆ. ರೈತರ ಪರ ಸರ್ಕಾರ ಇದ್ದರೆ ಪರಿಹಾರ ಸಿಗುತ್ತದೆ. ರಾಜ್ಯದಲ್ಲಿ ರೈತರ ಪತ್ರ ಸರ್ಕಾರ ಇಲ್ಲ ಎಂದು ಹೇಳಿದರು.























