ಗದಗ: ಗದಗ ಜಿಲ್ಲಾಧಿಕಾರಿ ಕಚೇರಿಯನ್ನ ಬಾಂಬ್‌ನಿಂದ ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಮೂಡಿತ್ತು.
ಗದಗ ಜಿಲ್ಲಾಡಳಿತದ ಅಧಿಕೃತ ಇ-ಮೇಲ್‌ಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಅರ್ನಾ ಅಶ್ವಿನ್ ಶೇಖರ್ ಹೆಸರಿಂದ ಇ-ಮೇಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯ ಐದು ಕಡೆಗಳಲ್ಲಿ ಬಾಂಬ್ ಇಡಲಾಗಿದೆಯೆಂಬ ಬೆದರಿಕೆ ಬಂದಿದೆ.
ಇದನ್ನೂ ಓದಿ: ನಮ್ಮ ತಂದೆ ಶಾಮನೂರು ಕೊಡುಗೆ ಅಪಾರ: ಸಚಿವ ಮಲ್ಲಿಕಾರ್ಜುನ
ಬಾಂಬ್ ಇಟ್ಟಿರುವ ಬಗ್ಗೆ ಇ-ಮೇಲ್ ಬಂದ ಕೂಡಲೇ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ರೋಹನ್ ಗಮನಕ್ಕೆ ತಂದಿದ್ದಾರೆ. ಎಸ್ಪಿ ಸೂಚನೆಯಂತೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ, ಶ್ವಾನದಳದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮೂಲೆ ಮೂಲೆಗಳಲ್ಲಿ ಪರಿಶೀಲನೆ ನಡೆಸಿದರು.
ಸುಮಾರು ಎರಡು ಗಂಟೆಗಳ ಕಾಲ ಜಿಲ್ಲಾಧಿಕಾರಿಗಳ ಕೊಠಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರೂ ಸಹ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹುಸಿಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಂಬ್ ಪತ್ತೆಯಾಗದ್ದರಿಂದ ಕಚೇರಿಯಲ್ಲಿನ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.









