ನರಗುಂದ (ಗದಗ): ಕನ್ನಡ ರಾಜ್ಯೋತ್ಸವದ ಅಂಗವಾಗಿ ನರಗುಂದ ತಾಲೂಕಿನ ಭೈರನಹಟ್ಟಿ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಭವ್ಯ ರಥೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಪಂಚಲೋಹದಿಂದ ನಿರ್ಮಿತ ಭುವನೇಶ್ವರಿ ತಾಯಿಯ ಮೂರ್ತಿಯನ್ನು ಅಲಂಕರಿಸಿ ರಥದಲ್ಲಿ ಇರಿಸಲಾಯಿತು. ಮಠದ ಆವರಣದಿಂದ ಹೊರಟ ಕನ್ನಡ ರಥೋತ್ಸವ ರಾಷ್ಟ್ರೀಯ ಹೆದ್ದಾರಿ 218ರ ಮಾರ್ಗವಾಗಿ ಸಾಗಿದ್ದು, ಬೈರನಹಟ್ಟಿ ಗ್ರಾಮದ ರಾಜಬೀದಿಯವರೆಗೆ ಮೆರವಣಿಗೆ ನಡೆಯಿತು.
ಬ್ರಹ್ಮಾನಂದರ ದೇವಸ್ಥಾನವರೆಗೂ ಪಾದಯಾತ್ರೆ ರೂಪದಲ್ಲಿ ರಥವನ್ನು ಎಳೆದೊಯ್ದು ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಸ್ಥಳೀಯರು ಹಣ್ಣು, ಕಾಯಿ ಸಮರ್ಪಣೆ ಮಾಡುತ್ತಾ ಕನ್ನಡ ತಾಯಿಗೆ ಪ್ರಾರ್ಥನೆ ಸಲ್ಲಿಸಿದರು. “ಜೈ ಕನ್ನಡ ತಾಯಿ”, “ಜೈ ಕರ್ನಾಟಕ” ಘೋಷಣೆಗಳಿಂದ ಗ್ರಾಮವಾಸಿಗಳು ಉತ್ಸಾಹದಿಂದ ತುಂಬಿದ್ದರು.
ಕಾರ್ಯಕ್ರಮವನ್ನು ಪೂಜ್ಯ ಶಾಂತಲಿಂಗ ಸ್ವಾಮಿಜಿ ಸಾನಿಧ್ಯದಲ್ಲಿ, ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಉದ್ಘಾಟಿಸಿದರು. ಕನ್ನಡಪರ ಚಿಂತಕರಾದ ಹುಬ್ಬಳ್ಳಿಯ ರವೀಂದ್ರ ದೊಡ್ಡಮೇಟಿ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಚನ್ನಮ್ಮನ ವಂಶಸ್ಥರಾದ ಮುಲ್ಲಸರ್ಜಾ ದೇಸಾಯಿ, ಬಿ.ಸಿ. ಹನಮಂತಗೌಡ್ರ, ಎಸ್.ಜಿ. ಮಣ್ಣೂರಮಠ, ರವಿಚಂದ್ರ ಜಂಗನ್ನವರ ಹಾಗೂ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೌಡರ ಸೇರಿದಂತೆ ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.
ಭೈರನಹಟ್ಟಿ ಮಠದ ಈ ಸಾಂಸ್ಕೃತಿಕ ಮಹೋತ್ಸವವು ರಾಜ್ಯೋತ್ಸವದ ನಿಜವಾದ ಹಬ್ಬದ ಸಂಭ್ರಮವನ್ನು ಗ್ರಾಮೀಣ ಮಟ್ಟದಲ್ಲೂ ಪ್ರತಿ ಕನ್ನಡ ಹೃದಯಕ್ಕೆ ತಲುಪಿಸಿದೆ.


























