ಗದಗ/ಲಕ್ಕುಂಡಿ: ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ನೆಲೆವೀಡಾಗಿ ಪ್ರಸಿದ್ಧಿಯಾಗಿರುವ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತನ ಕಾಲದ ಅಮೂಲ್ಯ ನಿಧಿಯೊಂದು ಪತ್ತೆಯಾಗಿದ್ದು, ಇಡೀ ಜಿಲ್ಲೆಯ ಗಮನ ಸೆಳೆದಿದೆ. ಗ್ರಾಮದ 4ನೇ ವಾರ್ಡ್‌ನ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಹಳೆಯ ಮನೆಯನ್ನು ಕೆಡವಿ, ಹೊಸ ಮನೆಗೆ ಅಡಿಪಾಯ ಹಾಕುವ ವೇಳೆ ಈ ಅಪರೂಪದ ಘಟನೆ ನಡೆದಿದೆ.
ಮನೆ ನಿರ್ಮಾಣಕ್ಕಾಗಿ ಕಾರ್ಮಿಕರು ಗುಂಡಿ ಅಗೆಯುತ್ತಿದ್ದಾಗ, ಮಣ್ಣಿನ ಅಡಿಯಲ್ಲಿ ಅಡಗಿದ್ದ ಹೊಳೆಯುವ ಚಿನ್ನಾಭರಣಗಳು ಮತ್ತು ಚಿನ್ನದ ನಾಣ್ಯಗಳು ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು ಅರ್ಧ ಕೆಜಿಗೂ ಅಧಿಕ ತೂಕದ ಪುರಾತನ ಶೈಲಿಯ ಬಂಗಾರದ ಆಭರಣಗಳು ಮತ್ತು ನಾಣ್ಯಗಳು ದೊರೆತಿವೆ ಎನ್ನಲಾಗಿದೆ.
ಇದನ್ನೂ ಓದಿ: ಖ್ಯಾತ ಲೇಖಕಿ ಆಶಾ ರಘು ನಿಧನ
ಗ್ರಾಮದಲ್ಲಿ ಕುತೂಹಲ, ಜನರ ದಂಡು: ನಿಧಿ ಪತ್ತೆಯ ಸುದ್ದಿ ಗ್ರಾಮದಲ್ಲಿ ಕಾಳಿಚ್ಚಿನಂತೆ ಹರಡುತ್ತಿದ್ದಂತೆಯೇ, ಲಕ್ಕುಂಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ತಂಡೋಪತಂಡವಾಗಿ ಗಂಗವ್ವ ಅವರ ಮನೆಗೆ ಧಾವಿಸಿದರು. ಪುರಾತನ ಚಿನ್ನಾಭರಣಗಳನ್ನು ಕಣ್ಣಾರೆ ನೋಡಲು ಜನರು ಸೇರಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಯಿತು.
ಅಧಿಕಾರಿಗಳ ಭೇಟಿ, ವಸ್ತುಗಳು ವಶಕ್ಕೆ: ವಿಷಯ ತಿಳಿಯುತ್ತಿದ್ದಂತೆಯೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೊರೆತ ಎಲ್ಲಾ ಚಿನ್ನದ ವಸ್ತುಗಳು ಹಾಗೂ ನಾಣ್ಯಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು, ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಾಗಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ
ಯಾವ ಕಾಲಘಟ್ಟದ ನಿಧಿ?: ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದು, “ದೊರೆತಿರುವ ಆಭರಣಗಳು ಮತ್ತು ಚಿನ್ನದ ನಾಣ್ಯಗಳು ಅತ್ಯಂತ ಪುರಾತನ ಕಾಲದ್ದಾಗಿರುವ ಸಾಧ್ಯತೆ ಇದೆ. ಇವು ಯಾವ ರಾಜವಂಶಕ್ಕೆ ಸೇರಿದವು, ಯಾವ ಕಾಲಘಟ್ಟದವು ಮತ್ತು ಯಾವ ಉದ್ದೇಶಕ್ಕಾಗಿ ನೆಲದೊಳಗೆ ಮರೆಮಾಡಲಾಗಿತ್ತು ಎಂಬುದು ಪೂರ್ಣ ಪ್ರಮಾಣದ ಪುರಾತತ್ವ ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ” ಎಂದು ತಿಳಿಸಿದ್ದಾರೆ.
ಐತಿಹಾಸಿಕ ಮಹತ್ವದ ಲಕ್ಕುಂಡಿ: ಚಾಲುಕ್ಯರ ಕಾಲದ ದೇಗುಲಗಳು, ಶಿಲ್ಪಕಲೆ ಮತ್ತು ಶಿಲಾಶಾಸನಗಳಿಗೆ ಪ್ರಸಿದ್ಧವಾದ ಲಕ್ಕುಂಡಿ ಗ್ರಾಮದಲ್ಲಿ ಇಂತಹ ನಿಧಿ ಪತ್ತೆಯಾಗಿರುವುದು, ಈ ಪ್ರದೇಶದ ಐತಿಹಾಸಿಕ ಮತ್ತು ಪುರಾತತ್ವ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಈ ಪತ್ತೆ ಲಕ್ಕುಂಡಿಯ ಇತಿಹಾಸದ ಹೊಸ ಅಧ್ಯಾಯವನ್ನು ತೆರೆದುಕೊಳ್ಳುವ ಸಾಧ್ಯತೆ ಇದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.









