Home ನಮ್ಮ ಜಿಲ್ಲೆ ಗದಗ ಲಕ್ಕುಂಡಿಯಲ್ಲಿ ಪ್ರಾಚೀನ ಕೊಡಲಿ, ಕಂಬದ ಬೋದಿಗೆ ಪತ್ತೆ

ಲಕ್ಕುಂಡಿಯಲ್ಲಿ ಪ್ರಾಚೀನ ಕೊಡಲಿ, ಕಂಬದ ಬೋದಿಗೆ ಪತ್ತೆ

0
15

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ನಾಲ್ಕನೇಯ ದಿನದ ಉತ್ಖನನದಲ್ಲಿ ನವಶಿಲಾಯುಗದ ಕೈ ಕೊಡಲಿ, ಕಂಬದ ಬೋದಿಗೆ ದೊರೆತಿದೆ.

ಕಲ್ಲಿನ ಕೈಕೊಡಲಿ ಪ್ರಾಚಿನ ಶಿಲಾಯುಗದಲ್ಲಿ ಬೇಟೆಗಾಗಿ ಇಲ್ಲವೇ ಸ್ವರಕ್ಷಣೆಗಾಗಿ ಬಳಕೆ ಮಾಡುತ್ತಿರಬಹುದಾಗಿದೆ. ಕಲ್ಲಿನ ಕಂಬದ ಬೋಧಿಗೆಯನ್ನು ಗಮನಿಸಿದಾಗ ಇಲ್ಲಿ ಯಾವುದೋ ಪ್ರಾಚೀನ ದೇವಾಲಯವಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಈಗಾಗಲೇ ಗ್ರಾಮದಲ್ಲಿ ನಡೆದಿರುವ ಉತ್ಖನನದಲ್ಲಿ ಪ್ರಾಚೀನ ಶಿವಲಿಂಗದ ಪಾಣಿಪೀಠ, ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿವೆ. ಪತ್ತೆಯಾಗಿರುವ ವಸ್ತುಗಳು ಯಾವ ಕಾಲಕ್ಕೆ ಸೇರಿದ್ದಾವೆಂಬುದು ಇತಿಹಾಸ ತಜ್ಞರ ಅಧ್ಯಯನದಿಂದ ಬೆಳಕಿಗೆ ಬರಲಿದೆಯೆಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ

ಉತ್ಖನನದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ವಿಶಿಷ್ಟ ವಸ್ತುಗಳು ದೊರೆಯುತ್ತಿರುವುದರಿಂದ ಗ್ರಾಮದ ಭೂ ಗರ್ಭದಲ್ಲಿ ಪ್ರಾಚೀನ ಟಂಕಸಾಲೆ, ವಿವಿಧ ದೇವಾಲಯಗಳು ಹುದುಗಿರಬಹುದೆಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಉತ್ಖನನ ಮುಂದುವರೆಯಲಿದೆಯೆಂದು ಮೂಲಗಳು ತಿಳಿಸಿವೆ.

ಉತ್ಖನನ ನಡೆಯುತ್ತಿರುವ ಸ್ಥಳವನ್ನು ನಿಷೇಧಿತ ಪ್ರದೇಶವನ್ನಾಗಿ ಜಿಲ್ಲಾಧಿಕಾರಿಗಳು ಘೋಷಿಸಿದ್ದರೂ ಸಹ ಗ್ರಾಮಸ್ಥರು, ವಿವಿಧ ಊರುಗಳ ಸಾರ್ವಜನಿಕರು ಕುತೂಹಲಕ್ಕಾಗಿ ಲಕ್ಕುಂಡಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಈ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ.