ಹುಬ್ಬಳ್ಳಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಪಿಜಿಗೆ ಹಾಹಾಕಾರ ಕಂಡು ಬಂದಿದ್ದು, ಇದರ ಬಿಸಿ ಬರೀ ಹೊಟೇಲ್ಗಳಿಗೆ ಮಾತ್ರವಲ್ಲ, ತೀರ್ಥ ಕ್ಷೇತ್ರ, ದೇವಸ್ಥಾನಗಳ ಪ್ರಸಾದ ನಿಲಯಗಳಿಗೂ ತಟ್ಟಿದೆ.
ಆದರೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠದಲ್ಲಿ ಇಂತಹ ಯಾವುದೇ ಆತಂಕದ ಸ್ಥಿತಿ ಇಲ್ಲ ! ಪ್ರತಿನಿತ್ಯ ಶ್ರೀಮಠದ ಪ್ರಸಾದ ನಿಲಯದಲ್ಲಿ ಅಂದಾಜು 8000 ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ರವಿವಾರ, ಸೋಮವಾರ, ವಿಶೇಷ ದಿನಗಳಲ್ಲಿ 12 ಸಾವಿರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಸಿಹಿ ಪದಾರ್ಥ, ಪಲ್ಯ, ಅನ್ನ ಮತ್ತು ಸಾಂಬಾರ್ನ್ನು ಪ್ರಸಾದ ನಿಲಯದಲ್ಲಿ ಭಕ್ತ ಸಮೂಹಕ್ಕೆ ಪ್ರತಿನಿತ್ಯ ಪೂರೈಸಲಾಗುತ್ತದೆ.
ಇಷ್ಟೊಂದು ಭಕ್ತರಿಗೆ ಪ್ರತಿನಿತ್ಯ ಪ್ರಸಾದಸಿದ್ಧಗೊಳ್ಳುವುದು `ಕಟ್ಟಿಗೆ (ಸೌದೆ) ಒಲೆಯಲ್ಲಿಯೇ’. ಅನ್ನ, ಸಾಂಬಾರ್, ಪಲ್ಯ, ಸಿಹಿ ಪದಾರ್ಥ ಎಲ್ಲವೂ ಈ ಸೌದೆ ಒಲೆಯಲ್ಲಿಯೇ ಸಿದ್ಧಗೊಳ್ಳುತ್ತದೆ. ಪ್ರಸಾದ ತಯಾರಿಗೆ ಶೇ.90ರಷ್ಟು ಕಟ್ಟಿಗೆಯನ್ನು ಉರುವಲಿಗೆ ಬಳಸಲಾಗುತ್ತದೆ. ಶೇ. 10ರಷ್ಟು ಮಾತ್ರ ಅಡುಗೆ ಅನಿಲ ಬಳಕೆ ಮಾಡಲಾಗುತ್ತದೆ.
ಶೇ. 10ರಷ್ಟು ಅಡುಗೆ ಅನಿಲ ಪೂರೈಕೆ ವ್ಯತ್ಯಯವಾದರೂ ಏನೂ ಪರಿಣಾಮ ಬೀರದು. ಅದನ್ನೂ ಕಟ್ಟಿಗೆ ಒಲೆಯಲ್ಲಿಯೇ ಸಿದ್ಧಪಡಿಸಿಕೊಳ್ಳಲಾಗುತ್ತದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಹೀಗಾಗಿ, ರಾಜ್ಯದ ಯಾವುದೇ ದೇವಸ್ಥಾನ, ತೀರ್ಥ ಕ್ಷೇತ್ರದಲ್ಲಿ ಅಡುಗೆ ಅನಿಲ ಕೊರತೆಯಿಂದ ಪ್ರಸಾದ ಸಿದ್ಧಪಡಿಸಿ ಭಕ್ತರಿಗೆ ಪೂರೈಸಲು ಅಡಚಣೆ ಆದರೂ ಶ್ರೀ ಸಿದ್ಧಾರೂಢಮಠದಲ್ಲಿ ಮಾತ್ರ ಪ್ರಸಾದ ತಯಾರಿಗೆ ಅಡಚಣೆ ಇಲ್ಲ.
ಅರಣ್ಯ ಇಲಾಖೆಯ ಕಿರವತ್ತಿ ಡಿಪೋದಿಂದ ಸೌದೆ ಬರುತ್ತೆ: ಇಡೀ ವರ್ಷಕ್ಕೆ ಪ್ರಸಾದ ತಯಾರಿಕೆ ಎಷ್ಟು ಕಟ್ಟಿಗೆ ಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಿರವತ್ತಿಯ ಸರ್ಕಾರಿ ಕಟ್ಟಿಗೆ ಡಿಪೋದಲ್ಲಿ ಶ್ರೀಮಠದ ಟ್ರಸ್ಟ್ ಕಮೀಟಿ ಕಟ್ಟಿಗೆಯನ್ನು ಖರೀದಿಸುತ್ತದೆ. ವರ್ಷಕ್ಕೆ 20ಕ್ಕೂ ಹೆಚ್ಚು ಲಾರಿಗಳಷ್ಟು ಕಟ್ಟಿಗೆ ಖರೀದಿಸಲಾಗುತ್ತದೆ. ಗುಣಮಟ್ಟದ ಕಟ್ಟಿಗೆ ಇರುವುದರಿಂದ ಅದರ ಇದ್ದಿಲು, ಅಂಗಾರವನ್ನು ಶ್ರೀಮಠ ಬಳಸಿಕೊಳ್ಳುತ್ತದೆ.





















