ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಆಸ್ತಿ ತೆರಿಗೆ, ಇ-ಸ್ವತ್ತು, ಜನನ-ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತೋಡಿಕೊಳ್ಳಲು ಪಾಲಿಕೆಯ ಆಯುಕ್ತ, ಮೇಯರ್, ಉಪಮೇಯರ್ ಹಾಗೂ ಸದಸ್ಯರನ್ನು ಭೇಟಿಯಾಗಬೇಕು ಎಂದಿದ್ದರೆ ದಯಮಾಡಿ ಪಾಲಿಕೆಗೆ ಬರಬೇಡಿ. ಏಕೆಂದರೆ ನೀವು ಚುನಾಯಿಸಿ ಕಳುಹಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮೋಜು ಮಸ್ತಿಯಲ್ಲಿ ಬ್ಯುಸಿ ಆಗಿದ್ದಾರೆ..!
ಪೌರ ಪಾರ್ಮಿಕರಿಗೆ, ಸಿಬ್ಬಂದಿಗೆ ಸಂಬಳ ಹಾಗೂ ನಿವೃತ್ತರಿಗೆ ಪಿಂಚಣಿ ನೀಡಲು ಹೆಣಗಾಡುತ್ತಿರುವ ಹು-ಧಾ ಮಹಾನಗರ ಪಾಲಿಕೆಯ ಸ್ಥಿತಿ ಚಿಂತಾಜನಕವಾಗಿದೆ. ಇದರ ಮಧ್ಯೆಯೂ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಅಧ್ಯಯನದ ಹೆಸರಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಕರದಾತರ ಕೆಂಗಣ್ಣಿಗೆ ಗುರಿಯಾಗಿದೆ. ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ್ ಚೌಹಾಣ, ಆಯುಕ್ತ ಡಾ. ರುದ್ರೇಶ್ ಘಾಳಿ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಸೇರಿದಂತೆ ಒಟ್ಟು 57 ಜನರು ಅಧ್ಯಯನ ಹೆಸರಿನಲ್ಲಿ ಗುರುವಾರ ಮೋಜಿನ ಪ್ರವಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ಯೋಗಾನರಸಿಂಹಸ್ವಾಮಿ ದೇವಾಲಯ: ಹೊಸ ವರ್ಷಕ್ಕೆ ಸಿದ್ದವಾಗುತ್ತಿವೆ ತಿರುಪತಿ ಮಾದರಿಯ 2 ಲಕ್ಷ ಲಡ್ಡು
ಯೋಚನೆ ಇಲ್ಲವೇ…?: ಸರ್ಕಾರದಿಂದ ಪಾಲಿಕೆಗೆ ನೂರಾರು ಕೋಟಿ ರೂ. ಅನುದಾನ ಬರಬೇಕಿದೆ. ಜನ ಸಂದಾಯ ಮಾಡಿದ ತೆರಿಗೆಯ ಹಣದಿಂದಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಹೊರತಾಗಿ ಬಿಡಿಗಾಸೂ ಪಾಲಿಕೆಯ ಬೊಕ್ಕಸದಲ್ಲಿಲ್ಲ ಎಂದು ಗೊಣಗುತ್ತಲೇ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಿದ್ದ ಮೇಯರ್, ಉಪಮೇಯರ್ ಹಾಗೂ ಆಯುಕ್ತರಿಗೆ ಪ್ರವಾಸಕ್ಕೆ ಖರ್ಚಾಗುವ ಹಣದ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲವೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
51 ಸದಸ್ಯರು, 6 ಅಧಿಕಾರಿಗಳ ತಂಡ: 51 ಸದಸ್ಯರು, 6 ಅಧಿಕಾರಿಗಳನ್ನು ಒಳಗೊಂಡ ಪಾಲಿಕೆಯ ತಂಡ ಗುರುವಾರ ಬೆಳಗ್ಗೆ ಐದು ಗಂಟೆಗೆ ಹುಬ್ಬಳ್ಳಿಯ ಪಾಲಿಕೆ ಕಚೇರಿಯಿಂದ ವಿಶೇಷ ಬಸ್ ಮೂಲಕ ಗೋವಾಕ್ಕೆ ತೆರಳಿದೆ. ಅಲ್ಲಿಂದ ಮಧ್ಯಾಹ್ನ 2:30 ಗಂಟೆಗೆ ವಿಮಾನದ ಮೂಲಕ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇಂದೋರ್‌ನಲ್ಲಿ ಎರಡು ದಿನ ವಾಸ್ತವ್ಯ ಮಾಡಿ, ಭಾನುವಾರ ಅಹ್ಮದಾಬಾದ್‌ಗೆ ತೆರಳಲಿದ್ದಾರೆ. ಅಲ್ಲಿ ಒಂದು ದಿನ ವಾಸ್ತವ್ಯ ಮಾಡಿ ಮರಳಿ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರಂತೆ.
ಇದನ್ನೂ ಓದಿ: ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕ್ಯಾತಪ್ಪ ದೇವರ ಜಾತ್ರೆಗೆ ವಿದ್ಯುಕ್ತ ಚಾಲನೆ
ಮಹಾನರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ರಾಜಣ್ಣ ಕೊರವಿ ನೇತೃತ್ವದ ತಂಡ ಕಳೆದ ವರ್ಷ ಸ್ವಚ್ಛತೆ ಕುರಿತು ಅಧ್ಯಯನ ಮಾಡಿ ಬಂದಿದ್ದರು. ಇದೀಗ ಮತ್ತೊಂದು ದೊಡ್ಡ ತಂಡ ಸ್ವಚ್ಛತೆ ಅಧ್ಯಯನ ನೆಪದಲ್ಲಿ ಮೋಜಿನ ಪ್ರವಾಸ ಕೈಗೊಂಡಿರೋದು ಅನುಮಾನ ಮೂಡಿಸಿದೆ. ಪ್ರತಿ ಬಾರಿ ಮೇಯರ್ ಆಗಿ ಆಯ್ಕೆಯಾದವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಸ್ವಚ್ಛತೆಯ ಅಧ್ಯಯನ ಮಾಡುತ್ತಿದ್ದಾರೆ. ಆದರೆ ವಾಪಸಾದ ಬಳಿಕವೂ ಹುಬ್ಬಳ್ಳಿ ಯಾವುದೇ ಸುಧಾರಣೆ ಕಂಡಿಲ್ಲ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಸ್ವಚ್ಛತೆಯ ಅಧ್ಯಯನ ಎಂಬ ಪ್ರಶ್ನೆ ಕಾಡುತ್ತಿದೆ. ಕಳೆದ ಬಾರಿಯೂ ರಾಮಣ್ಣ ಬಡಿಗೇರ ಮೇಯರ್ ಆಗಿದ್ದ ಅವಧಿಯಲ್ಲೂ ಅಧ್ಯಯನ ಪ್ರವಾಸ ನಡೆಸಲಾಗಿತ್ತು. ಆದರೆ ಉದ್ದೇಶ ಮಾತ್ರ ಈಡೇರಲಿಲ್ಲ.
ಮುಖ್ಯ ಲೆಕ್ಕಾಧಿಕಾರಿಗೇನು ಕೆಲಸ?: ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿ ಸದಸ್ಯರು ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಒಟ್ಟು ಐದು ದಿನಗಳ ಮೋಜು ಪ್ರವಾಸಕ್ಕೆ ಒಬ್ಬರಿಗೆ ಕನಿಷ್ಠ ಒಂದು ಲಕ್ಷ ರೂ. ಖರ್ಚಾಗಲಿದೆ ಎಂದು ಪಾಲಿಕೆ ಅಧಿಕಾರಿಗಳೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧ್ಯಯನ ತಂಡದಲ್ಲಿ ಮುಖ್ಯ ಲೆಕ್ಕಾಧಿಕಾರಿಗಳ ಪಾತ್ರ ಏನು ಎಂಬುದು ಬಹು ಮುಖ್ಯವಾದಂತ ಪ್ರಶ್ನೆ. ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಹೆಚ್ಚುವರಿ ಆಯುಕ್ತರೂ ಆಗಿದ್ದಾರೆ. ಅವರು ಆಡಳಿತಾತ್ಮಕ ವಿಚಾರಗಳು ಮಾತ್ರ ನೋಡಿಕೊಳ್ಳುವರು. ಇದರಲ್ಲಿ ಅವರ ಪಾತ್ರ ಏನೆಂಬುದನ್ನು ಆಯುಕ್ತರೇ ಹೇಳಬೇಕು.























