ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಲು ನಿರ್ಧರಿಸುವ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲೂ ಸಮೀಕ್ಷೆಯ ಪೂರ್ವ ಕಾರ್ಯದ ಹಿನ್ನೆಲೆಯಲ್ಲಿ ಮನೆ ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯ ಭರದಿಂದ ಸಾಗಿದ್ದು, ಹೆಸ್ಕಾಂ ವ್ಯಾಪ್ತಿಯ 37 ಲಕ್ಷ ಮನೆಗಳಿಗೆ ಸ್ಟಿಕರ್ ಅಂಟಿಸಲಿದ್ದಾರೆ.
ಹೌದು.. ಹೆಸ್ಕಾಂನಿಂದ ಆರ್‌ಆರ್ ನಂಬರ್ ಆಧಾರದಲ್ಲಿ ಸಮೀಕ್ಷೆಗೆ ಮನೆ ಮನೆಗೆ ಸ್ಟಿಕರ್ ಅಂಟಿಸಲಾಗುತ್ತಿದೆ. ಧಾರವಾಡ ಜಿಲ್ಲೆ ಸೇರಿ ಹೆಸ್ಕಾಂ ವ್ಯಾಪ್ತಿಯ ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ವಿಜಯಪುರ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮನೆ ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ ಹೆಸ್ಕಾಂನ 3 ಸಾವಿರ ಸಿಬ್ಬಂದಿ ಕಾರ್ಯ ಮಾಡುತ್ತಿದ್ದಾರೆ.
ಎಲ್ಲ ಮನೆಗಳ ವಿದ್ಯುತ್ ಮೀಟರ್‌ನ ಆರ್‌ಆರ್ ನಂಬರ್‌ನ್ನು ಆಧಾರವಾಗಿಸಿಟ್ಟುಕೊಂಡು ಸ್ಟಿಕರ್‌ಗಳನ್ನು ಅಂಟಿಸಲಾಗುತ್ತಿದೆ. ಸೆ.20 ರ ನಂತರ ಹಿಂದುಳಿದ ವರ್ಗಗಳ ಆಯೋಗ ಇದರ ಆಧಾರದ ಮೇಲೆ ಮನೆ ಗುರುತಿಸಿ ಸಮೀಕ್ಷೆ ನಡೆಸಲಿದೆ.
(ಯುಎಚ್‌ಐಡಿ) ಜಿಯೋ ಟ್ಯಾಗಿಂಗ್: ಹೆಸ್ಕಾಂನಿಂದ ವಿದ್ಯುತ್ ಮೀಟರ್ ಅಳವಡಿಸಿರುವ ಮನೆಗಳಿಗೆ (ಯುಎಚ್‌ಐಡಿ) ಜಿಯೋ ಟ್ಯಾಗಿಂಗ್ ಇರುವ ಸ್ಟಿಕರ್ ಅಂಟಿಸಲಾಗುತ್ತಿದೆ. ಸೆ. 10ರೊಳಗೆ ಸ್ಟಿಕರ್ ಅಂಟಿಸುವ ಕಾರ್ಯ ಬಹುತೇಕ ಪೂರ್ಣಗೊಳ್ಳಲಿದೆ ಎಂದು ತಿಳಿದಿದೆ.
ಮೀಟರ್ ಇಲ್ಲದ ಮನೆಗಳನ್ನು ಗುರುತಿಸಿ ಅವರನ್ನು ಸಮೀಕ್ಷೆ ಮಾಡುವ ಕಾರ್ಯ ಮುಂದಿನ ಹಂತದಲ್ಲಿ ಗ್ರಾಮಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾಡಿದ ಬಳಿಕ ಜಿಯೋ ಟ್ಯಾಗಿಂಗ್ ಅಳವಡಿಸುವ ಕಾರ್ಯ ನಡೆಯಲಿದೆ.
ಹೆಸ್ಕಾಂ ವ್ಯಾಪ್ತಿಯಲ್ಲಿ 37 ಲಕ್ಷ ಕುಟುಂಬದ ಸಮೀಕ್ಷೆ: ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ವಿಜಯಪುರ, ಉತ್ತರ ಕನ್ನಡದಲ್ಲಿ 37 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ. ಈಗಾಗಲೇ ಗದಗದಲ್ಲಿ ಶೇ. 81, ಬಾಗಲಕೋಟೆಯಲ್ಲಿ ಶೇ. 80.22, ವಿಜಯಪುರ ಶೇ. 78.08, ಹಾವೇರಿ ಶೇ. 76.76, ಧಾರವಾಡ ಶೇ. 60,97, ಬೆಳಗಾವಿ 59.57, ಉತ್ತರ ಕನ್ನಡ 54.17 ರಷ್ಟು ಸ್ಟಿಕರ್ ಅಂಟಿಸುವ ಕಾರ್ಯ ಮುಕ್ತಯವಾಗಿದೆ.
ಸ್ಟೀಕರ್‌ಗಳನ್ನು ಎಲ್ಲೆಲ್ಲಿ ಎಷ್ಟು ಅಂಟಿಸಲಾಗುತ್ತದೆ?: ಗದಗ ಜಿಲ್ಲೆಯಲ್ಲಿ 2,41,611, ಬಾಗಲಕೋಟೆ ಜಿಲ್ಲೆಯಲ್ಲಿ 4,11,362, ವಿಜಯಪುರ ಜಿಲ್ಲೆಯಲ್ಲಿ 3,81,331, ಹಾವೇರಿ 3,34,596, ಧಾರವಾಡ 3,59,862, ಬೆಳಗಾವಿ ಜಿಲ್ಲೆಯಲ್ಲಿ 7,31,770, ಉತ್ತರ ಕನ್ನಡ ಜಿಲ್ಲೆಯಲ್ಲಿ 2,41,089 ಆರ್‌ಆರ್ ಸಂಖ್ಯೆ ಇರುವ ಮನೆಗಳ ಸಂಪರ್ಕವಿದ್ದು, ಈ ಮನೆಗಳಿಗೆ ಸ್ಟಿಕರ್ ಅಂಟಿಸುವ ಕಾರ್ಯ ನಡೆದಿದೆ.
ಹೆಸ್ಕಾಂ ವ್ಯಾಪ್ತಿಯಲ್ಲಿ 1.98.215 ಮನೆಗಳಿಗಿಲ್ಲ ಆರ್‌ಆರ್ ಸಂಖ್ಯೆ: ಇನ್ನೂ ಹೆಸ್ಕಾಂ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯಲ್ಲಿ 15115, ಬಾಗಲಕೋಟೆಯಲ್ಲಿ 38010, ವಿಜಯಪುರ 58881, ಹಾವೇರಿ 18740, ಧಾರವಾಡ 10696, ಬೆಳಗಾವಿ 49207 ಹಾಗೂ ಉತ್ತರ ಕನ್ನಡ 7566 ಆರ್‌ಆರ್ ನಂಬರ್ ಇಲ್ಲದ ಮನೆಗಳನ್ನು ಗುರುತಿಸಲಾಗಿದೆ.
ಯುಎಚ್‌ಐಡಿ ಸ್ಟಿಕರ್ ಕೀಳಬೇಡಿ: “ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ 37 ಲಕ್ಷ ಮನೆಗಳಿಗೆ ಯುಎಚ್‌ಐಡಿ ಸ್ಟಿಕರ್ ಅಂಟಿಸಲಾಗುತ್ತಿದೆ. ಇದನ್ನು ಯಾರು ಕೀಳಬಾರದು. ಹಿಂದುಳಿದ ವರ್ಗಗಳ ಆಯೋಗ ಇದರ ಆಧಾರದ ಮೇಲೆ ಸಮೀಕ್ಷೆ ಮಾಡಲಿದೆ. ಹೆಸ್ಕಾಂ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ 3 ಸಾವಿರ ಜನರನ್ನು ನಿಯೋಜಿಸಿದೆ.” ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.