Home Advertisement
Home ನಮ್ಮ ಜಿಲ್ಲೆ ಧಾರವಾಡ ಸಿದ್ದರಾಮಯ್ಯ ಸ್ಥಾನ ಅಭದ್ರ: ಭವಿಷ್ಯ ನುಡಿದ ಮಣ್ಣಿನ ಬೊಂಬೆ

ಸಿದ್ದರಾಮಯ್ಯ ಸ್ಥಾನ ಅಭದ್ರ: ಭವಿಷ್ಯ ನುಡಿದ ಮಣ್ಣಿನ ಬೊಂಬೆ

0
65

ಸಿ.ವೈ. ಲಗಮಣ್ಣವರ
ಧಾರವಾಡ (ಉಪ್ಪಿನಬೆಟಗೇರಿ): ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಭದ್ರ ಎಂದು ಧಾರವಾಡ ತಾಲೂಕು ಉಪ್ಪಿನಬೆಟಗೇರಿಯ ಹನುಮನಕೊಪ್ಪ ಗ್ರಾಮದ ವರ್ಷದ ಯುಗಾದಿ ಫಲಾಫಲದ ಮಣ್ಣಿನ ಬೊಂಬೆ ಭವಿಷ್ಯ ತಿಳಿಸಿದೆ.

ಗ್ರಾಮದ ತುಪ್ಪರಿ ಹಳ್ಳದ ತಟದಲ್ಲಿ ಸಂಪ್ರದಾಯಬದ್ಧವಾಗಿ ಮಣ್ಣಿನಿಂದ ನಿರ್ಮಿಸಿರುವ ಗದ್ದುಗೆಯ ಮೂಲಕ ಬೊಂಬೆಗಳ ಯುಗಾದಿ ಫಲಾಫಲದ ವರ್ಷದ ಭವಿಷ್ಯದ ಮುನ್ಸೂಚನೆಯನ್ನು ಯುಗಾದಿ ಪಾಡ್ಯೆಯ ದಿನವಾದ ಗುರುವಾರ ಬೆಳಿಗ್ಗೆ ಹನುಮನಕೊಪ್ಪ ಗ್ರಾಮದ ಹಿರಿಯರಾದ ಕಲ್ಲಪ್ಪ ಬೊಬ್ಬಿ, ನಾಗರಾಜ ಹಾರೋಬೆಳವಡಿ, ಅಜಿತ ಛಬ್ಬಿ, ವರ್ಧಮಾನ ಅಷ್ಟಗಿ, ಶೇಖಪ್ಪ ಜಾಧವ ಮಣ್ಣಿನ ಬೊಂಬೆ ಭವಿಷ್ಯದ ಮೂಲಕ ತಿಳಿಸಿದ್ದಾರೆ.

ಕೇಂದ್ರದಲ್ಲಿ ಹಲವಾರು ಅಡೆತಡೆಗಳ ನಡುವೆಯೂ ಪ್ರಧಾನಿ ಕುರ್ಚಿ ಭದ್ರವಾಗಿದ್ದು, ದೇಶದಲ್ಲಿ ಆಹಾರದ ಕೊರತೆಯಾದರೂ ಜನತೆಗೆ ಯಾವುದೇ ತೊಂದರೆಯಾಗದು. ಜಗತ್ತಿನಲ್ಲಿ ಯುದ್ಧದ ಭೀತಿ ಮುಂದುವರೆಯುವುದು, ಮಳೆಗಾಲ ಅಭದ್ರವಾಗಿದ್ದು, ರೈತಾಪಿ ವರ್ಗಕ್ಕೆ ಸಂಕಷ್ಟ, ದನಕರುಗಳಿಗೆ ರೋಗಬಾಧೆ ಉಂಟಾಗುವುದು. ಕೊಬ್ಬರಿ ಮತ್ತು ಬೆಲ್ಲಕ್ಕೆ ಬೇಡಿಕೆ ಇರುವುದು. ಧವಸ ಧಾನ್ಯಗಳಿಗೆ ಬೇಡಿಕೆ ಕಡಿಮೆ ಇದ್ದು ಈಗಿನಂತೆ ಯಥಾಸ್ಥಿತಿ ಮುಂದುವರೆಯಲಿದೆ. ಆದರೆ ಕಾಳು ಕಡಿ ಇಟ್ಟು ಮಾರಿದರೆ ಬೇಡಿಕೆ ಬರುವುದು ಎಂದು ಬೊಂಬೆ ಭವಿಷ್ಯದಿಂದ ಕಂಡು ಬಂದಿದೆ.

ಇದನ್ನೂ ಓದಿ: LPG ಕೊರತೆ ಬಳಿಕ ಮತ್ತೊಂದು ಶಾಕ್: ಪೆಟ್ರೋಲ್ ದುಬಾರಿ

ಯುಗಾದಿ ಫಲಾಫಲ ಕಟ್ಟಿದ ಮಣ್ಣಿನ ಗದ್ದುಗೆಯ ನಾಲ್ಕು ದಿಕ್ಕಿಗೆ ಇರುವ ರಾಜಕಾರಣದ ದಿಕ್ಸೂಚಿಯ ಬೊಂಬೆಯಲ್ಲಿ ರಾಜ್ಯ ರಾಜಕೀಯ ಸೂಚಿಸುವ ದಿಕ್ಕಿನ ಬೊಂಬೆಗೆ ಧಕ್ಕೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ದ ಎಂದು ಹೇಳಲಾಗಿದೆ. ಅದರಂತೆ ರಾಷ್ಟ್ರ ರಾಜಕಾರಣ ಸೂಚಿಸುವ ಬೊಂಬೆ ಮುಖ ಧ್ವಜದಿಂದ ಮರೆಮಾಚಿದ್ದು ಆತಂಕವಿದ್ದರೂ ಪ್ರಧಾನಿ ಮೋದಿಗೆ ಧರ್ಮ ರಕ್ಷಣೆಯಿಂದ ಯಾವುದೇ ತೊಂದರೆ ಇಲ್ಲವೆಂದು ಸೂಚಿಸುತ್ತದೆ. ಹಾಗೂ ಈ ಬೊಂಬೆಯ ಮುಂದೆ ಇಟ್ಟಿರುವ ಅನ್ನದ ಉಂಡೆ ಒಡೆದಿದ್ದು ಇದರಿಂದ ದೇಶದಲ್ಲಿ ಆಹಾರದ ಕೊರತೆಯುಂಟಾದರೂ ಜನತೆಗೆ ಆಹಾರದ ಯಾವುದೇ ತೊಂದರೆಯಾಗುವುದಿಲ್ಲ. ಜಗತ್ತಿನ ಆಗು ಹೋಗುಗಳನ್ನು ಸೂಚಿಸುವ ಬೊಂಬೆಯಲ್ಲಿರುವ ಧ್ವಜ ಕೆಳಗೆ ಬಿದ್ದಿದ್ದು ವಿಶ್ವದಲ್ಲಿ ಯುದ್ದದ ಬಾಧೆ ಬಾಧಿಸಲಿದೆ ಎಂದು ತಿಳಿದು ಬಂದಿದೆ.

ರೈತರಿಗೆ ಸಂಬಂಧಿಸಿದ ಬೊಂಬೆಗೆ ಅಲ್ಪ ಧಕ್ಕೆಯಾಗಿದ್ದು ಇದರಿಂದಾಗಿ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಲಿದೆ. ಫಲಾಫಲದ ಗದ್ದುಗೆಯ ಮೇಲಿಟ್ಟಿದ್ದ ಕೊಬ್ಬರಿ ಬಟ್ಟಲು ಮತ್ತು ಬೆಲ್ಲದ ಉಂಡೆಗೆ ಯಾವುದೇ ತರಹದ ಮುಕ್ಕು ಆಗಿರುವುದಿಲ್ಲ ಹೀಗಾಗಿ ಬೆಲ್ಲ ಮತ್ತು ಕೊಬ್ಬರಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಇಲ್ಲಿನ ಯುಗಾದಿಯ ವರ್ಷದ ಫಲಾಫಲದ ಬೊಂಬೆಯ ಭವಿಷ್ಯದ ಮುನ್ಸೂಚನೆ ತಿಳಿಸಿದೆ.

ನೂರಾರು ವರ್ಷಗಳ ಹಿನ್ನೆಲೆ: ನೂರಾರು ವರ್ಷಗಳಿಂದ ಪ್ರತಿ ವರ್ಷ ಹನುಮನಕೊಪ್ಪ ಗ್ರಾಮದ ಹಿರಿಯರು ಯುಗಾದಿ ಹಬ್ಬದಂದು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿರುವ ದೇಶದ ಮತ್ತು ರಾಜ್ಯದ ರಾಜಕೀಯ ಭವಿಷ್ಯ, ಮಳೆ ಹಾಗೂ ಬೆಳೆಗಳ ಕುರಿತು, ಆಹಾರ ಧಾನ್ಯಗಳ ಧಾರಣಿ, ಆರೋಗ್ಯದ ಕುರಿತು ಹೀಗೆ ಹಲವಾರು ವಿದ್ಯಮಾನಗಳ ಬಗ್ಗೆ ಭವಿಷ್ಯ ತಿಳಿಸುವ ‘ಯುಗಾದಿ ಫಲ ಕಟ್ಟುವ’ ವಿಶಿಷ್ಟ ಆಚರಣೆ ಇಲ್ಲಿ ಮೊದಲಿನಿಂದಲೂ ಆಚರಣೆಯಲ್ಲಿದ್ದು ಅದರಂತೆ ಇಲ್ಲಿ ಜರುಗುವ ಮಣ್ಣಿನ ಬೊಂಬೆಗಳ ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಘಟನಾವಳಿಗಳ ಮುನ್ಸೂಚನೆಗಳು ಸೇರಿದಂತೆ ಹಲವಾರು ಘಟನೆಗಳು ನಿಜ ಭವಿಷ್ಯಗಳಾಗಿ ಘಟಿಸಿವೆ.

ಇದನ್ನೂ ಓದಿ: ಆಡಳಿತ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಕ್ಲೈಮ್ಯಾಕ್ಸ್ ಹಂತಕ್ಕೆ

ನಿಜವಾದ ಮಣ್ಣಿನ ಬೊಂಬೆ ಭವಿಷ್ಯಗಳು: ಬೊಂಬೆಗಳ ನುಡಿದ ಭವಿಷ್ಯಕ್ಕೆ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರ ಹತ್ಯೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ದುರಂತ ಸಾವು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಹಾಗೂ ಚಿತ್ರನಟ ಪುನೀತ ರಾಜಕುಮಾರ ಅವರ ಅಕಾಲಿಕ ಸಾವು ಈ ಎಲ್ಲ ಘಟನೆಗಳ ಮುನ್ಸೂಚನೆಯನ್ನು ಬೊಂಬೆಗಳು ಮೊದಲೇ ತಿಳಿಸಿದ್ದವು.

ಫಲ ಕಟ್ಟುವ ಸಂಪ್ರದಾಯ: ಯುಗಾದಿ ಅಮಾವಾಸ್ಯೆಯ ದಿನ ಸಂಜೆ ಗ್ರಾಮದ ಯುವಕರು, ಹಿರಿಯರು ಸೇರಿ ತುಪ್ಪರಿ ಹಳ್ಳದಲ್ಲಿ ಮಣ್ಣಿನಿಂದ ಗದ್ದುಗೆಯನ್ನು ನಿರ್ಮಿಸುತ್ತಾರೆ. ಆ ಗದ್ದುಗೆಯಲ್ಲಿಯೇ ಇನ್ನೊಂದು ಚಿಕ್ಕ ಗದ್ದುಗೆಯನ್ನು ನಿರ್ಮಿಸುತ್ತಾರೆ. ಆ ಗದ್ದುಗೆಯ ಮೇಲೆ ನಂದಿಯ ಮೇಲೆ ವಿರಾಜಮಾನರಾದ ಪಾರ್ವತಿದೇವಿ, ಪರಮೇಶ್ವರ ಹಾಗೂ ಗಣೇಶನ ಮಣ್ಣಿನ ಬೊಂಬೆಗಳನ್ನು ಪ್ರತಿಷ್ಠಾಪಿಸುತ್ತಾರೆ. ಇದರ ಮುಂದೆ ಅನ್ನದ ಉಂಡೆ ಹಾಗೂ ಒಣ ಕೊಬ್ಬರಿ ಬಟ್ಟಲ ಇಟ್ಟಿರುತ್ತಾರೆ. ದೊಡ್ಡ ಗದ್ದುಗೆಯ ನಾಲ್ಕು ದಿಕ್ಕಿಗೆ ರಾಜಕಾರಣದ ದಿಕ್ಸೂಚಿ ದಿಕ್ಕುಗಳು ಅಂತಾ ಈಶಾನ್ಯ, ವಾಯವ್ಯ, ಆಗ್ನೇಯ, ನೈರುತ್ಯ ಈ ದಿಕ್ಕುಗಳಲ್ಲಿ ನಾಲ್ಕು ಮನುಷ್ಯ ರೂಪದ ಬೊಂಬೆಗಳನ್ನು ಕೂಡಿಸುತ್ತಾರೆ.

ನಂದಿಯ ಪಕ್ಕ ರೈತರ ಭವಿಷ್ಯ ತಿಳಿಸುವ ಎತ್ತುಗಳ ಹಾಗೂ ರೈತನ ಉತ್ತುವ ಬಿತ್ತುವ ಬೊಂಬೆಗಳನ್ನು ನಿರ್ಮಿಸುತ್ತಾರೆ. ಹಾಗೆಯೇ 17 ಮಳೆಗಳ ಭವಿಷ್ಯ ತಿಳಿಯುವ ಸಲುವಾಗಿ 17 ಖಾಲಿಯಿರುವ ಎಕ್ಕೆ ಎಲೆಗಳನ್ನು ಎಕ್ಕೆ ಎಲೆಯಿಂದಲೇ ಮುಚ್ಚಿರುತ್ತಾರೆ. ಇದೇ ರೀತಿ ಎಕ್ಕೆ ಎಲೆಗಳಲ್ಲಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಜೋಳ, ಹತ್ತಿ, ಶೇಂಗಾ ಹಾಗೂ ಹಿಂಗಾರು ಬೆಳೆಗಳಾದ ಕಡಲೆ, ಗೋಧಿ, ಜೋಳದ ಕಾಳುಗಳನ್ನು ಹಾಕಿ ಮುಚ್ಚಿರುತ್ತಾರೆ. ಹಾಗೂ ಪ್ರತಿ ತಿಂಗಳಂತೆ ಆಹಾರ ಧಾನ್ಯಗಳ ಧಾರಣಿ ತಿಳಿಯುವ ಸಲುವಾಗಿ ಎಲ್ಲ ಆಹಾರ ಧಾನ್ಯಗಳನ್ನು ಎಕ್ಕೆ ಎಲೆಗಳಲ್ಲಿ ಮುಚ್ಚಿ ಆ ಎಲ್ಲ ಎಲೆಗಳ ಮೇಲೆ ಮಣ್ಣಿನ ಉಂಡೆಯನ್ನು ಇಡುತ್ತಾರೆ.

ಇದನ್ನೂ ಓದಿ: ಕಾಪಿರೈಟ್ ವಿವಾದಕ್ಕೆ ತೆರೆ: ಸುಜೋಯ್ ಘೋಷ್‌ಗೆ ಸುಪ್ರೀಂ ಬಿಗ್ ರಿಲೀಫ್

ಮಣ್ಣಿನ ಬೊಂಬೆಗಳಿಂದ ಭವಿಷ್ಯ: ಯುಗಾದಿ ಪಾಡ್ಯೆಯ ದಿನ ಬೆಳಿಗ್ಗೆ 6 ಗಂಟೆಗೆ ಯುವಕರು ಹಿರಿಯರೆಲ್ಲರೂ ಸೇರಿ ಫಲ ಕಟ್ಟಿದ ಸ್ಥಳಕ್ಕೆ ಬರುತ್ತಾರೆ. ಗದ್ದುಗೆಗೆ ಪೂಜೆ ಸಲ್ಲಿಸಿ, ಕ್ರಮಬದ್ಧವಾಗಿ ಒಂದೊಂದೇ ಪರಿಶೀಲಿಸುತ್ತಾರೆ. ನಂದಿ ನಂದಿಯ ಮೇಲೆ ಕುಳಿತಿರುವ ಶಿವ, ಪಾರ್ವತಿ, ಗಣೇಶನಿಗೆ ಯಾವುದೇ ತೊಂದರೆ ಆಗಿಲ್ಲವೆಂದರೆ ಸರ್ವವೂ ಸುಖಮಯ. ನಾಲ್ಕು ದಿಕ್ಕಿಗೆ ಇರುವ ಬೊಂಬೆಗೆ ಯಾವುದೇ ಧಕ್ಕೆ ಆಗಿಲ್ಲವೆಂದರೆ ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಯಾವ ದಿಕ್ಕಿನಲ್ಲಿನ ಬೊಂಬೆಗೆ ತೊಂದರೆ ಆಗುತ್ತೋ ಆ ದಿಕ್ಕಿನಲ್ಲಿರುವ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಹಾಗೂ ರಾಜಕಾರಣಿಗಳಿಗೆ ಮತ್ತು ಗಣ್ಯ ವ್ಯಕ್ತಿಗಳಿಗೆ ತೊಂದರೆಯಾಗುವುದು ಎಂದು ತಿಳಿಯಲಾಗುವುದು.

ಎತ್ತು ಮತ್ತು ರೈತನಿಗೆ ಯಾವುದೇ ಧಕ್ಕೆ ಆಗಿದ್ದರೆ ರೈತನಿಗೆ ಮತ್ತು ದನ ಕರುಗಳಿಗೆ ಅಪಾಯವಿರುತ್ತದೆ. 17 ಮಳೆಗಳ ಭವಿಷ್ಯ ತಿಳಿಸುವ ಎಕ್ಕೆ ಎಲೆಗಳನ್ನು ಒಂದೊಂದೇ ತೆಗೆದಾಗ ಯಾವ ಎಲೆಯಲ್ಲಿ ನೀರಿನ ಹನಿಗಳು ಎಷ್ಟು ಬೀಳುತ್ತವೆಯೋ ಅಷ್ಟು ಆ ಮಳೆಯು ಸಮೃದ್ಧವಾಗಿ ಆಗುವುದು ಎಂಬ ನಂಬಿಕೆಯಾಗಿದೆ. ಹಿಂಗಾರು ಮತ್ತು ಮುಂಗಾರು ಬೆಳೆಗಳ ಕಾಳುಗಳಲ್ಲಿ ಎಷ್ಟು ನೀರಿನ ಹನಿಗಳು ಬೀಳುತ್ತವೆ ಅದರ ಮೇಲೆ ಈ ಬೆಳೆಗಳು ಉತ್ತಮವಾಗಿ ಬರುತ್ತವೆ ಎಂದು ತಿಳಿಯಲಾಗುತ್ತದೆ. ಅದರಂತೆ ಎಲ್ಲ ಆಹಾರ ಧಾನ್ಯಗಳು ಪ್ರತಿ ತಿಂಗಳಂತೆ ಉತ್ತಮ ಧಾರಣಿ ಸಿಗುತ್ತದೆ ಎಂಬ ದ್ಯೋತಕವಾಗಿ ಆ ಕಾಳುಗಳ ಎಲೆಯಲ್ಲಿ ಕೀಟಗಳು ಕಂಡು ಬಂದರೆ ಆ ಧಾನ್ಯಗಳಿಗೆ ಆ ತಿಂಗಳಲ್ಲಿ ಉತ್ತಮ ಧಾರಣಿ ಸಿಗುವುದು ಎಂಬ ಭವಿಷ್ಯ ತಿಳಿದು ಬರುತ್ತದೆ.

ಹನುಮನಕೊಪ್ಪದ ಚಿದಂಬರ ಶಾಸ್ತ್ರಿಗಳಿಂದ 1936 ರಿಂದ ಈ ಯುಗಾದಿ ಫಲಾಫಲ ಕಟ್ಟುವ ಸಂಪ್ರದಾಯ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಇಲ್ಲಿನ ಫಲಾಫಲ ಮಣ್ಣಿನ ಬೊಂಬೆ ಭವಿಷ್ಯವು ಸಾಕಷ್ಟು ಸಲ ನಿಜ ಆಗಿದೆ ಎಂದು ಹಿರಿಯರಾದ ನರಸಿಂಹರಾವ ದೀಕ್ಷಿತ, ನಾಗರಾಜ ಹಾರೋಬೆಳವಡಿ, ಕಲ್ಲಪ್ಪ ಬೊಬ್ಬಿ, ಶಿವಾನಂದ ಹಟ್ಟಿ, ವರ್ಧಮಾನ ಅಷ್ಟಗಿ ಹೇಳುತ್ತಾರೆ.