ಧಾರವಾಡ: ಸಂಕ್ರಾಂತಿವರೆಗೆ ಸದ್ಯಕ್ಕೆ ಸಿದ್ದರಾಮಯ್ಯ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಧಾರವಾಡ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಿದ್ದರಾಮಯ್ಯ ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಸಂಕ್ರಾಂತಿ ನಂತರ ಈ ಕುರಿತು ಹೇಳುತ್ತೇವೆ ಎಂದರು.
ಬಯಲು ಸೀಮೆ ಮಲೆನಾಡು ಆಗುತ್ತದೆ ಎಂದು ಹಿಂದೆ ನಾನು ಹೇಳಿದ್ದೆ, ನಾನು ಹೇಳಿದಂತೆ ಅತಿಯಾದ ಮಳೆಯಿಂದ ಸಮಸ್ಯೆಯಾಗಿದೆ. ಬಯಲು ಸೀಮೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಳಾಗಿವೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆ ಕುರಿತು ಮಾತನಾಡಿ, ರಾಜ್ಯದಲ್ಲಿ ಜನರು ಬುದ್ಧಿವಂತರಾಗಿದ್ದಾರೆ, ತಿಳಿವಳಿಕೆ ಇದ್ದವರಿದ್ದಾರೆ. ಅವರು ತಮಗೆ ಬೇಕೆನಿಸಿದ್ದನ್ನು ಮಾಡುತ್ತಾರೆ ಎಂದರು.
ದುಷ್ಟ ಶಕ್ತಿಗಳು ಹೋಗಬೇಕೆಂಬುದು ನಮ್ಮ ಹಬ್ಬಗಳ ಉದ್ದೇಶ. ಮನುಷ್ಯನಿಗೆ ಶಾಂತಿ ಲಭಿಸಬೇಕು, ಸುಖ, ನೆಮ್ಮದಿ ದೊರೆಯಬೇಕು. ಹಬ್ಬಗಳ ಆಚರಣೆ ನಮ್ಮ ಪರಂಪರೆಯ ಸಂಕೇತ ಎಂದರು.