ಸುರೇಂದ್ರ ದಾನಿ ವ್ಯಕ್ತಿತ್ವ ಮೆಲುಕು ಹಾಕಿದ ಹಿರಿಯ ಪತ್ರಕರ್ತರು

0
2

ಹುಬ್ಬಳ್ಳಿ: ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಅವರ ಮೇರು ವ್ಯಕ್ತಿತ್ವದ ಅನಾವರಣಕ್ಕೆ ಸಾಕ್ಷಿಯಾಯಿತು.

ಸಮಾರೋಪ ಸಮಾರಂಭದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಿಇಓ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ್ ಹೆಗಡೆ ಅವರು ಮಾತನಾಡಿ, ಸುರೇಂದ್ರ ದಾನಿ ಮೃದು ಸ್ವಭಾವದ ವ್ಯಕ್ತಿ. ಪತ್ರಿಕೋದ್ಯಮ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಅಭ್ಯುದಯ ಚಳುವಳಿ, ಸಂಘಟನೆಯಲ್ಲಿ ವಿಶೇಷವಾಗಿ ಸೇವೆಗೈದಿದ್ದಾರೆ ಎಂದು ಬಣ್ಣಿಸಿದರು. ಅವರ ಸಂಪರ್ಕಕದಿಂದ ತಮಗೂ ಪತ್ರಿಕಾರಂಗದಲ್ಲಿ ಹೆಚ್ಚು ಅನುಭವ ಸಿಕ್ಕಿದೆ. ಸಂಯುಕ್ತ ಕರ್ನಾಟಕ ಅವರ ಮನೆ, ಉಸಿರು, ಬದುಕು ಆಗಿತ್ತು. ನೂರಾರು ಪತ್ರಕರ್ತರು, ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಮಾತನಾಡಿ, ಕಿರಿಯ ಪತ್ರಕರ್ತರು ಅವರ ಮಾರ್ಗದರ್ಶನದಲ್ಲಿ ನಡೆದರೆ ಅವರಿಗೆ ಗೌರವ ಕೊಟ್ಟಂತೆ ಎಂದರು. ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ದಾನಿ ಅವರು ಬಹಳ ಎತ್ತರದ ವ್ಯಕ್ತಿ. ಎಡವೂ ಅಲ್ಲ, ಬಲವೂ ಅಲ್ಲ ಮಧ್ಯದಲ್ಲಿ ನಿಂತು ಒಂದು ಪೀಳಿಗೆಯ ಪತ್ರಕರ್ತರಿಗೆ ಪ್ರೇರಣೆ ನೀಡಿದವರು ಎಂದರು.

ಇದನ್ನೂ ಓದಿ: ಪತ್ರಿಕಾವೃತ್ತಿಗೆ ಮೌಲ್ಯ ತಂದ ಸುರೇಂದ್ರ ದಾನಿ

ಪತ್ರಕರ್ತ ಬಂಡು ಕುಲಕರ್ಣಿ ಮಾತನಾಡಿ, ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿಭಾಗದಲ್ಲಿ ಇಂತವರ ಬಗ್ಗೆ ಯುವ ಪತ್ರಕರ್ತರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು. ವೇದಮೂರ್ತಿ ಶಂಕರ ಭಟ್ ಜೋಶಿ, ಹಿರಿಯ ಪತ್ರಕರ್ತ ವಿಶ್ವನಾಥ ಕುಲಕರ್ಣಿ, ಸುಧೀಂದ್ರ ದೇಶಪಾಂಡೆ ಅವರು ಮಾತನಾಡಿದರು. ಅಂಬರೀಷ ಹಾನಗಲ್ ಕಾರ್ಯಕ್ರಮ ನಿರೂಪಿಸಿದರು.

ಸಂಯುಕ್ತ ಕರ್ನಾಟಕ ಕಾಲೇಜಿದ್ದಂತೆ: ಸಂಯುಕ್ತ ಕರ್ನಾಟಕ ನಿಜವಾದ ಪತ್ರಕರ್ತರ ಕಾಲೇಜು ಎಂದು ಹಿರಿಯ ಪತ್ರಕರ್ತ ವೆಂಕಟನಾರಾಯಣ ವರ್ಣಿಸಿದರು. ಇಂದು ಸಂಯುಕ್ತ ಕರ್ನಾಟಕದಲ್ಲಿ ವೃತ್ತಿ ಮಾಡಿದವರು ವಿವಿಧ ಕಡೆ ಹೆಸರು ಮಾಡಿದ್ದಾರೆ ಎಂದರು. ಸುರೇಂದ್ರ ದಾನಿಯವರು ವಜ್ರದಷ್ಟು ಕಠೋರವಾಗಿದ್ದರೂ ಮೃದು ಸ್ವಭಾವದವರಾಗಿದ್ದರು. ಅಂತವರು ಬಲು ಅಪರೂಪ ಎಂದರು.

ಗಮಕ ಪ್ರೀತಿ ಅಪಾರ: ದಾನಿಯವರ ಗಮಕ ಪ್ರೀತಿ ವಿಚಾರಗೋಷ್ಠಿಯಲ್ಲಿ ಪ್ರೊ.ಎನ್.ಎಸ್. ನಾಡಗೀರ ಅವರು ಮಾತನಾಡಿ, ಸುರೇಂದ್ರ ದಾನಿ ಅವರು ಗಮಕಿಗಳನ್ನು ಹುಬ್ಬಳ್ಳಿಗೆ ಹೆಚ್ಚಾಗಿ ಕರೆಯಿಸಿ ಇಲ್ಲಿ ಕಾರ್ಯಕ್ರಮ ಕೊಡಿಸಿರುವುದು ವಿಶೇಷವಾಗಿದೆ ಎಂದರು.

ದಾನಿಯವರ ಲೇಖನ ಹರಿತವಾಗಿದ್ದವು. ಮಹಾಭಾರತ ಕನ್ನಡದ ಪುಸ್ತಕ ರೂಪದಲ್ಲಿ ಬಂದಿದ್ದು ವಿರಳ. ಅದರಲ್ಲಿ ದಾನಿಯವರ ಪುಸ್ತಕ ಒಂದು ಎಂದರಲ್ಲದೇ, ಕುಮಾರವ್ಯಾಸ ಸೇವಾ ಸಂಘ-ಸಾಧನೆ ಕುರಿತು ಮಾತನಾಡಿದರು.

Previous articleಪತ್ರಿಕಾವೃತ್ತಿಗೆ ಮೌಲ್ಯ ತಂದ ಸುರೇಂದ್ರ ದಾನಿ