Home Advertisement
Home ನಮ್ಮ ಜಿಲ್ಲೆ ಧಾರವಾಡ ಹಿರಿಯ ಪತ್ರಕರ್ತ ಭೀಮಸೇನ ಪದಕಿ ನಿಧನ

ಹಿರಿಯ ಪತ್ರಕರ್ತ ಭೀಮಸೇನ ಪದಕಿ ನಿಧನ

0
4

ಪತ್ರಿಕೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ವ್ಯಕ್ತಿತ್ವಕ್ಕೆ ಅಂತಿಮ ವಿದಾಯ

ಹುಬ್ಬಳ್ಳಿ: ಹುಬ್ಬಳ್ಳಿಯ ವಿಕಾಸನಗರ ನಿವಾಸಿಯಾಗಿದ್ದ ಹಾಗೂ ಸಂಯುಕ್ತ ಕರ್ನಾಟಕ ಸಮೂಹ ಸಂಸ್ಥೆಯ ಹಿರಿಯ ಪತ್ರಕರ್ತರಾದ ಭೀಮಸೇನ ಎಂ. ಪದಕಿ (82) ಅವರು ಶನಿವಾರ (ಜ.24) ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿ ವಿಶಿಷ್ಟ ಗುರುತು ಮೂಡಿಸಿದ್ದರು.

ಮೃತ ಭೀಮಸೇನ ಪದಕಿ ಅವರಿಗೆ ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪತ್ರಿಕಾ ವಲಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶೋಕದ ಛಾಯೆ ಆವರಿಸಿದೆ.

ಇದನ್ನೂ ಓದಿ:  ಕಟೌಟ್ ಕುಸಿತ ಪ್ರಕರಣ: ಗಾಯಾಳು ಯೋಗಕ್ಷೇಮ ವಿಚಾರಿಸಿದ ಸಚಿವ ಜಮೀರ್

ಸಂಯುಕ್ತ ಕರ್ನಾಟಕ ಸಮೂಹ ಸಂಸ್ಥೆಯಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಪದಕಿ ಅವರು, ಕರಡು ವಾಚಕರಾಗಿ ವೃತ್ತಿಜೀವನ ಆರಂಭಿಸಿ, ತಮ್ಮ ಶ್ರಮ, ಶಿಸ್ತು ಮತ್ತು ವಿಷಯಪೂರ್ಣ ಬರಹಗಳ ಮೂಲಕ ಹಿರಿಯ ಉಪಸಂಪಾದಕರಾಗಿ ನಿವೃತ್ತಿ ಹೊಂದಿದ್ದರು.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲದೆ, ಕರ್ಮವೀರ, ಕಸ್ತೂರಿ ಹಾಗೂ ಸಾಪ್ತಾಹಿಕ ಸೌರಭ ವಿಭಾಗಗಳಲ್ಲಿ ಅವರು ಕಾರ್ಯನಿರ್ವಹಿಸಿ, ಧಾರ್ಮಿಕ, ಶಾಸ್ತ್ರೀಯ ಮತ್ತು ಸಮಾಜಮುಖಿ ಲೇಖನಗಳ ಮೂಲಕ ಓದುಗರ ಮನಗೆದ್ದಿದ್ದರು.

ಇದನ್ನೂ ಓದಿ:  ಭಾರತೀಯ ಶಾಸ್ತ್ರೀಯ ಪುಸ್ತಕಗಳು, ಹಸ್ತಪ್ರತಿಗಳಿಗಾಗಿ ‘ಗ್ರಂಥ್ ಕುಟೀರ’ ಉದ್ಘಾಟನೆ

ಪತ್ರಿಕೋದ್ಯಮದ ಜೊತೆಗೆ ಸಮಾಜದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಆಧ್ಯಾತ್ಮಿಕ ಚಿಂತನೆ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಬರಹಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಬರಹಗಳು ಸರಳ ಭಾಷೆ, ಗಂಭೀರ ವಿಷಯ ಹಾಗೂ ನೈತಿಕ ಚಿಂತನೆಯ ಸಂಯೋಜನೆಯಾಗಿದ್ದವು ಎಂಬುದು ಸಹೋದ್ಯೋಗಿಗಳ ಅಭಿಪ್ರಾಯ.

ಭೀಮಸೇನ ಪದಕಿ ಅವರ ಪತ್ರಿಕೋದ್ಯಮದ ಸಾಧನೆಯನ್ನು ಗುರುತಿಸಿ ರಾಜ್ಯ ಮಾಧ್ಯಮಿಕ ಅಕಾಡೆಮಿ ಪ್ರಶಸ್ತಿ, ಹಾಗೆಯೇ ಹುಬ್ಬಳ್ಳಿ–ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಿದ್ದವು.

ಇದನ್ನೂ ಓದಿ: “ಲ್ಯಾಂಡ್ ಲಾರ್ಡ್” ದರ್ಶನಕ್ಕೆ ಸಿದ್ದರಾಮಯ್ಯ ಸಿದ್ದ

ಸಂತಾಪ ಸೂಚನೆ: ಭೀಮಸೇನ ಪದಕಿ ಅವರ ನಿಧನಕ್ಕೆ ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಹಾಗೂ ಟ್ರಸ್ಟ್‌ನ ಧರ್ಮದರ್ಶಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪದಕಿ ಅವರ ಪತ್ರಿಕೋದ್ಯಮ ಮತ್ತು ಸಮಾಜಮುಖಿ ಕೊಡುಗೆಗಳನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಹಿರಿಯ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಪದಕಿ ಅವರ ಆಧ್ಯಾತ್ಮಿಕ ಚಿಂತನೆ, ಬರಹಗಳು ಹಾಗೂ ತಮ್ಮೊಂದಿಗೆ ಹೊಂದಿದ್ದ ವೈಯಕ್ತಿಕ ಸಂಬಂಧವನ್ನು ಸ್ಮರಿಸಿಕೊಂಡು, ಅವರ ನಿಧನವನ್ನು ಅಪಾರ ನಷ್ಟವೆಂದು ಹೇಳಿದ್ದಾರೆ.

ಪತ್ರಿಕೋದ್ಯಮದ ಮೌಲ್ಯಗಳು, ಶಿಸ್ತು ಮತ್ತು ನಿಷ್ಠೆಗೆ ಪ್ರತೀಕವಾಗಿದ್ದ ಭೀಮಸೇನ ಪದಕಿ ಅವರ ನಿಧನದಿಂದ ಕನ್ನಡ ಪತ್ರಿಕಾ ಲೋಕ ಒಬ್ಬ ನಿಸ್ವಾರ್ಥ ಸೇವಕನನ್ನು ಕಳೆದುಕೊಂಡಂತಾಗಿದೆ.

Previous articleಗ್ಯಾರಂಟಿ ಯೋಜನೆ ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು