ಹುಬ್ಬಳ್ಳಿ: ಮೇಲ್ಸೇತುವೆ ಕಾಮಗಾರಿಗೆ ಬಂದ್ ಆಗಿದ್ದ ರಸ್ತೆ ಹಾಗೂ ಹಳೇ ಬಸ್ ನಿಲ್ದಾಣವನ್ನು ಸೆ. 3ರಿಂದ ಪುನರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿ, ನಾಲ್ಕುವರೆ ತಿಂಗಳು ಚನ್ನಮ್ಮ ವೃತ್ತದಿಂದ ಬಸವವನ ಹಾಗೂ ಚನ್ನಮ್ಮ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೆ ರಸ್ತೆ ಬಂದ್ ಮಾಡಲಾಗಿತ್ತು. ಇದೀಗ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಬಸ್ ನಿಲ್ದಾಣದ ಎದುರಿನ ರಸ್ತೆಯನ್ನು ಭಾಗಶಃ ಮುಕ್ತಗೊಳಿಸಲಾಗುವುದು ಎಂದರು.
ಇದಕ್ಕೂ ಮೊದಲು ಪ್ರಾಯೋಗಿಕವಾಗಿ ಲಘು ವಾಹನಗಳ ಸಂಚಾರ ನಡೆಸಿ, ಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು. ಬಸ್ ನಿಲ್ದಾಣದಿಂದ ಬಸ್‌ಗಳ ಸಂಚಾರ ಪುನರಾರಂಭವಾಗಲಿದೆ ಎಂದು ಹೇಳಿದರು.
ಚನ್ನಮ್ಮ ವೃತ್ತದಿಂದ ಬಸವವನದ ಪೂರ್ವ ವಿಆರ್‌ಎಲ್ ಕಚೇರಿವರೆಗೆ ಏಕಮುಖವಾಗಿ ಮಾತ್ರ ರಸ್ತೆ ಮುಕ್ತಗೊಳಿಸಲಾಗುವುದು. ಮತ್ತೊಂದು ಭಾಗದಲ್ಲಿ ಕಾಮಗಾರಿ ನಡೆಯಲಿದೆ. ಪೊಲೀಸ್ ಇಲಾಖೆ ಜೊತೆ ಇತರೆ ಇಲಾಖೆಗಳು ಸಹ ಒಪ್ಪಿಗೆ ನೀಡಿವೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಸ್ತೆ ಭಾಗಶಃ ಭಾಗದಲ್ಲಿ ವಾಹನ ಸಂಚಾರ ಆರಂಭದ ಕುರಿತು ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಬಂದ್ ಆಗಿರುವ ಎಲ್ಲ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಪಿಡಬ್ಲ್ಯುಡಿ ಎಇ ಪ್ರದೀಪ, ಡಿಸಿಪಿ ಸಿ.ಆರ್. ರವೀಶ್, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವೀರೇಶ, ತಹಶೀಲ್ದಾರ್ ಮಹೇಶ ಗಸ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಉದ್ಘಾಟನೆಗೊಂಡು ಮುಚ್ಚಿದ ಬಸ್ ನಿಲ್ದಾಣ: ಚೆನ್ನಮ್ಮಾ ವೃತ್ತದ ಬಳಿಯಿರುವ ಹಳೆ ಬಸ್ ನಿಲ್ದಾಣವನ್ನು ಅತ್ಯುತ್ತಮ ಮಾದರಿಯಲ್ಲಿ ನಿರ್ಮಿಸಿ ಜನವರಿಯಲ್ಲಿ ಉದ್ಘಾಟಿಸಲಾಯಿತು. ಆದರೆ, ನಂತರ ಕೆಲವೇ ದಿನಗಳಲ್ಲಿ ಫ್ಲೈಓವರ್ ಕಾಮಗಾರಿಗಾಗಿ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಅಂದಿನಿಂದ ಬಸ್ ನಿಲ್ದಾಣ ಮುಚ್ಚಲ್ಪಟ್ಟಿದೆ.
ನಿರಂತರ ಮಳೆ, ಕಾರ್ಮಿಕರ ಕೊರತೆ: ನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಆಗಸ್ಟ್ 20 ರ ಗಡವು ದಾಟಲು ನಿರಂತರ ಮಳೆ ಮತ್ತು ಕಾರ್ಮಿಕರ ಕೊರತೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಗಣೇಶ ವಿಸರ್ಜನೆಗೆ ಪರ್ಯಾಯ ಮಾರ್ಗ: ಫ್ಲೈ ಓವರ್ ಕಾಮಗಾರಿ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಆದರೆ ಮೇಲ್ಸೇತುವೆಯ ಕೆಳಗೆ ಎತ್ತರದ ನಿರ್ಬಂಧಗಳಿದ್ದು, ಎತ್ತರದ ವಿಗ್ರಹಗಳು ಸಾಗುವುದು ಸಾಧ್ಯವಿಲ್ಲ. ಹೀಗಾಗಿ ಕಾರವಾರ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗಿ ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ಎತ್ತರದ ವಿಗ್ರಹಗಳ ವಿಸರ್ಜನೆಗೆ ಯೋಜಿಸಲಾಗುತ್ತಿದೆ.