ಧಾರವಾಡ: ತಾಲೂಕಿನ ರಾಮಾಪುರ ಗ್ರಾಮದ ಹೊರವಲಯದಲ್ಲಿ ನಡೆದ ರಾಜು ಬೋಳಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ರಾಜು ಬೋಳಶೆಟ್ಟಿ ಅವರನ್ನು ಕೊಲೆ ಮಾಡಿ ರಾಮಾಪುರದ ಹೊರವಲಯದಲ್ಲಿ ಕಾರಿನಲ್ಲಿ ಶವ ಇಟ್ಟು ಕಾರಿಗೆ ಬೆಂಕಿ ಹಚ್ಚಿರುವುದಾಗಿ ಗೊತ್ತಾಗಿದೆ. ಈ ಘಟನೆ ಕುರಿತು ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ ಮಾಹಿತಿ ಪಡೆದು ಗುರುವಾರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ತನಿಖೆ ಕಾರಣದಿಂದ ಅವರ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದರು.
ಮೃತ ವ್ಯಕ್ತಿ ಸುಟ್ಟು ಕರಕಲಾಗಿದ್ದು, ಕಾರಿನ ನಂಬರ್ ಪ್ಲೇಟ್ ಆಧರಿಸಿ ಮೃತ ವ್ಯಕ್ತಿ ರಾಜು ಬೋಳಶೆಟ್ಟಿ ಎಂಬುದು ಗೊತ್ತಾಗಿದೆ. ತನಿಖೆ ಆರಂಭಿಸಿದ ನಂತರ ದೊರೆತ ಮಾಹಿತಿಯನ್ನಾಧರಿಸಿ ಮೂವರು ವ್ಯಕ್ತಿಗಳನ್ನು ಸದ್ಯಕ್ಕೆ ವಶಕ್ಕೆ ಪಡೆಯಲಾಗಿದೆ. ಇನ್ನೂ ಕೆಲವರನ್ನು ವಶಕ್ಕೆ ಪಡೆದು ಮಾಹಿತಿ ಪಡೆಯಲಾಗುವುದು. ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ಅಧಿಕಾರಿಗಳು ತನಿಖೆ ಕೈಗೊಂಡಾಗ ಮಾ. 23ರಂದು ಸುಮಾರಿಗೆ ಉಡಕೇರಿ ಗ್ರಾಮದಲ್ಲಿಯೇ ರಾಜು ಬೋಳಶೆಟ್ಟಿ ಅವರ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ. ಉಡಕೇರಿಯಿಂದ ಇನ್ನೊಂದು ವಾಹನದ ಮೂಲಕ ರಾಜು ಬೋಳಶೆಟ್ಟಿ ಇರುವ ಕಾರು ಫಾಲೋ ಮಾಡಿರುವ ಕುರಿತು ಮಾಹಿತಿ ಲಭಿಸಿದ್ದು, ಇನ್ನೊಂದು ವಾಹನದಲ್ಲಿ ಯಾರಿದ್ದರೆಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದರು. ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರ ಸಂಗ್ರಹಿಸಿದೆ. ಮೃತ ವ್ಯಕ್ತಿಯ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದರು.





















