ಹುಬ್ಬಳ್ಳಿ : ಸವದತ್ತಿ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರನ್ನು ನಗರದ ಶಿವಕೃಪಾ ಆಸ್ಪತ್ರೆಗೆ ತಡ ರಾತ್ರಿ ದಾಖಲಿಸಲಾಗಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡ ಪ್ರಸಾದ್ ಅವರನ್ನು ರಾತ್ರಿ 12 ಗಂಟೆ ಹೊತ್ತಿಗೆ ನಗರದ ಹಳೇ ಕೋರ್ಟ್ ವೃತ್ತದ ಬಳಿ ಇರುವ ಎನ್ ಎಂ ಆರ್ ಸ್ಕ್ಯಾನ್ ಸೆಂಟರ್ ಗೆ ಅಂಬ್ಯುಲೆನ್ಸ್ ನಲ್ಲಿ ಕರೆತರಲಾಯಿತು.
ಗಾಯಾಳು ಸ್ಕ್ಯಾನ್ ಸೆಂಟರ್ ಗೆ ತರುತ್ತಿದ್ದಂತೆಯೇ ನರರೋಗ ತಜ್ಞರಾದ ಡಾ.ಸುರೇಶ ದುಗ್ಗಾಣಿ ಅವರು ಅಂಬ್ಯುಲೆನ್ಸ್ ನಲ್ಲಿಯೇ ಗಾಯಾಳು ಸ್ಥಿತಿಗತಿ ಪರಿಶೀಲಿಸಿದರು. ಬಳಿಕ ಸ್ಕ್ಯಾನ್ ಸೆಂಟರ್ ಗೆ ಕರೆದೊಯ್ಯಲಾಯಿತು.
ಗಾಯಾಳು ಆಂಬ್ಯುಲೆನ್ಸ್ ಹಿಂದೆಯೇ ಧಾವಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಸ್ಕ್ಯಾನ್ ಸೆಂಟರ್ ಗೆ ಆಗಮಿಸಿದರು. ಡಾ.ಸುರೇಶ ದುಗ್ಗಾಣಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸ್ಕ್ಯಾನಿಂಗ್ ಬಳಿಕ ಗಾಯಾಳು ಸ್ಥಿತಿಗತಿ ಸ್ಪಷ್ಟವಾಗಿ ತಿಳಿಯಲಿದ್ದು, ನಂತರ ಚಿಕಿತ್ಸೆ ಮುಂದುವರಿಸುವಿದಾಗಿ ಹೇಳಿದರು.
ಗಾಯಾಳು ಸ್ಕ್ಯಾನಿಂಗ್ ಆಗುವವರೆಗೂ ಸ್ಕ್ಯಾನಿಂಗ್ ಸೆಂಟರ್ ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ ಇದ್ದರು. ಅಪಘಾತ ವಿಷಯ ತಿಳಿದು ತೀವ್ರ ಘಾಸಿಗೊಂಡ ಸ್ಥಿತಿಯಲ್ಲಿ ದ್ದ ಅವರು, ವೈದ್ಯಕೀಯ ವರದಿಗಳಿಗಾಗಿ ಕಾದು ನಿಂತಿದ್ದರು.
ಶಾಸಕ ಪ್ರಸಾದ್ ಅಬ್ಬಯ್ಯ, ಮುಖಂಡರಾದ ಸದಾನಂದ ಡಂಗನವರ. ಅನಿಲ್ ಕುಮಾರ ಪಾಟೀಲ್ , ಅಲ್ತಾಫ್ ಹಳ್ಳೂರ, ಸತೀಶ ಮೆಹರವಾಡೆ, ರಾಬರ್ಟ್ ದದ್ದಾಪುರಿ, ನಾಗರಾಜ ಗೌರಿ ಹಾಗೂ ಅನೇಕರಿದ್ದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗಾಯಾಳುವಿಗೆ ಚಿಕಿತ್ಸೆಗೆ ವ್ಯವಸ್ಥೆ ನಿಗಾ ವಹಿಸಿದ್ದರು.






















