ಧಾರವಾಡ: ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ನಾನೂ ಮಾಧ್ಯಮಗಳಲ್ಲಿಯೇ ನೋಡಿದ್ದೇನೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಶಾಸಕಾಂಗ ಪಕ್ಷದಲ್ಲಿ ತೀರ್ಮಾನವಾಗುತ್ತದೆ. ಹೈಕಮಾಂಡ್ ಹೇಳಿದ ಮೇಲೆ ನಾವೆಲ್ಲ ಒಪ್ಪಿಕೊಳ್ಳುವುದಿದೆ. ಕರ್ನಾಟಕದವರೇ ಆಗಿರುವ ಖರ್ಗೆ ಅವರಿಗೆ ಎಲ್ಲವೂ ಗೊತ್ತಿದೆ. ಎಲ್ಲವನ್ನೂ ಅವರು ನಿಭಾಯಿಸುತ್ತಾರೆ. ಹೈಕಮಾಂಡ ಸಿಎಂ ಬದಲಾವಣೆ ಬಗ್ಗೆ ನನ್ನನ್ನು ಕೇಳಿದರೆ ಮಾತ್ರ ಅವರಿಗೆ ರಿಯಾಕ್ಟ್ ಮಾಡುತ್ತೇನೆ ಎಂದರು.
ಮರ್ಯಾದೆ ಹತ್ಯೆ ಖಂಡನೀಯ: ಮಾನ್ಯಾ ಪಾಟೀಲ ಹತ್ಯೆ ಇಡೀ ರಾಜ್ಯವೇ ತಲೆ ತಗ್ಗಿಸುವಂತದ್ದು. ಹೆತ್ತ ಕರುಳನ್ನೇ ತಂದೆ ಇಲ್ಲವಾಗಿಸಿದ್ದಾನೆ. ಇದನ್ನು ಜಾತಿ ವೈಷಮ್ಯ ಎನ್ನುತ್ತೀರೋ ಅಥವಾ ಏನು ಎನ್ನುತ್ತೀರೋ ಗೊತ್ತಿಲ್ಲ. ಆದರೆ, ಘಟನೆಯಂತೂ ಆಗಿ ಹೋಗಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕೆಲವರು ಅರೆಸ್ಟ್ ಕೂಡ ಆಗಿದ್ದಾರೆ. ಮತ್ತಷ್ಟು ಜನರು ಅರೆಸ್ಟ್ ಆಗಬೇಕಿದೆ. ಇಂತಹ ಭಾವನೆಗಳಿಗೆ, ಮಠ ಮಾನ್ಯಗಳು ಜನರ ನಡುವೆ ಉತ್ತಮ ಭಾವನೆ ಸೃಷ್ಟಿ ಮಾಡಬೇಕು. ಮನುಷ್ಯರನ್ನು ಮನುಷ್ಯರ ರೀತಿ ಕಾಣುವ ಹಾಗೆ ಮಾಡಬೇಕು. ಅಲ್ಲಿನ ಘಟನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಯಾರಿಗೆ ಆಗಲಿ ದ್ವೇಷ, ಅಸೂಯೆ ಇರಬಾರದು. ನಾನು ಮತ್ತು ಮಾದರ ಚೆನ್ನಯ್ಯ ಸ್ವಾಮೀಜಿ ಅಲ್ಲಿಗೆ ಭೇಟಿ ನೀಡುತ್ತೇವೆ. ಊರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕು. ಇಂತಹ ಘಟನೆಗಳು ಮುಂದೆ ಆಗಬಾರದು ಎಂದರು.









