ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ: ಡಿ.ಆರ್. ಪಾಟೀಲ

0
43

ಧಾರವಾಡ: ಗ್ರಾಮೀಣ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿಗೆ ಸರಕಾರದಿಂದ ಬಿಡುಗಡೆ ಆಗುವ ಅನುದಾನದ ಪ್ರತಿ ಪೈಸೆ ಸದುಪಯೋಗವಾಗಬೇಕು. ಯೋಜನೆಗೆ ಅನುಗುಣವಾಗಿ ಹಣ ಬಳಕೆ ಆಗಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಆಗಬಾರದು. ನಮ್ಮ ಅಭಿವೃದ್ಧಿ ನಮ್ಮ ಸಹಭಾಗಿತ್ವದಲ್ಲಿ ಎಂಬ ಬಲವಾದ ನಂಬಿಕೆ ಸಾಮಾನ್ಯ ಜನರಲ್ಲಿ ಮೂಡಬೇಕು. ಇದಕ್ಕಾಗಿ ಯೋಜನೆಗಳ ಕೇಂದ್ರಿಕರಣ, ಅಧಿಕಾರದ ವಿಕೇಂದ್ರಿಕರಣ ಆಗಬೇಕು. ಅಂದಾಗ ಪಂಚಾಯತ ರಾಜ್ಯ ವ್ಯವಸ್ಥೆಗೆ ಉತ್ತಮ ಸ್ವರೂಪ ಬರುತ್ತದೆ ಎಂದು ನುಡಿದರು.

ಗ್ರಾಮಗಳಲ್ಲಿ ಶೌಚಾಲಯ ಹೆಚ್ಚಿಸಿ. ಗ್ರಾಮದ ಸ್ವಚ್ಛತೆಗೆ ತಿಂಗಳಿಗೊಂದು ದಿನ ಶ್ರಮದಾನ ಮಾಡಿ. ಅಧಿಕಾರಿಗಳ ನಡೆ ಜನರಲ್ಲಿ ಧನಾತ್ಮಕ ಪ್ರೇರಣೆ ಬೆಳೆಸಬೇಕು ಎಂದು ಹೇಳಿದರಲ್ಲದೇ ಸರಕಾರದ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿ, ಖುಷಿ ಪಡೋಣ. ಜನರ ಭಾವನೆಗಳನ್ನು ಗೌರವಿಸಿ, ಬೇಡಿಕೆಗಳಿಗೆ ಸ್ಪಂದಿಸಿದರೆ, ಜನರು ನಿಮ್ಮನ್ನು ದೈವಿ ಸ್ವರೂಪದಲ್ಲಿ ಕಾಣುತ್ತಾರೆ. ನಮಗೆ ಸಿಕ್ಕ ಸ್ಥಾನಮಾನ ಜನರ ಪ್ರಗತಿಗೆ ಬಳಸಿಕೊಳ್ಳಬೇಕು ಎಂದರು.

ಬರುವ ಮಾರ್ಚ್‌ 31ರೊಳಗೆ ಬೆಳಗಾವಿ ವಿಭಾಗದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಸಿಗಬೇಕು. ಇದು ಗ್ರಾಮಗಳ ಮೂಲಸೌಕರ್ಯವಾಗಿದ್ದು, ಆದ್ಯತೆ ನೀಡಬೇಕು ಎಂದು ಹೇಳಿದರು.

ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ ಯೋಜನೆ ಯಶಸ್ವಿಯಾಗುತ್ತದೆ. ಜನರ ಬೇಡಿಕೆಗಳನ್ನು ಗ್ರಾಮ ಸಭೆಗಳ ಮೂಲಕ ಸಂಗ್ರಹಿಸಿ, ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪ್ರತೀಕವಾಗಿರಬೇಕು. ಎಲ್ಲ ವರ್ಗದ ಜನರ, ಸಮುದಾಯಗಳ ಬೇಡಿಕೆಗಳನ್ನು ಗ್ರಾಮ ಮಟ್ಟದಲ್ಲಿ ಚರ್ಚಿಸಿ, ಸೇರ್ಪಡೆಗೊಳಿಸಬೇಕು ಎಂದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ.ಕೆ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ವೇದಿಕೆಯಲ್ಲಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಕರ್ನಾಟಕ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಧಾರವಾಡ ಜಿಲ್ಲಾ ಪಂಚಾಯತ ಸಿಇಒ ಭುವನೇಶ ಪಾಟೀಲ, ಬೆಳಗಾವಿ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ, ಉತ್ತರ ಕನ್ನಡ ಜಿಲ್ಲಾ ಪಂಚಾಯತ ಸಿಇಒ ಡಾ. ದೀಲಿಶ್ ಸಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Previous articleಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
Next articleದೆಹಲಿಯಲ್ಲಿ ಬಾಂಬ್‌ ಸ್ಫೋಟ: ಹುಬ್ಬಳ್ಳಿಯಲ್ಲೂ ಹೈ ಅಲರ್ಟ್

LEAVE A REPLY

Please enter your comment!
Please enter your name here