SWR ಜಿಎಂ, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರಿಶೀಲನಾ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (South Western Railway – SWR) ರೈಲ್ವೆ ಜನರಲ್ ಮ್ಯಾನೇಜರ್, ವಿವಿಧ ಜಿಲ್ಲಾಧಿಕಾರಿಗಳು ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಭಾಗದ ರೈಲ್ವೆ ಅಭಿವೃದ್ಧಿ ಕಾರ್ಯಗಳ ಕುರಿತು ಮಹತ್ವದ ಪರಿಶೀಲನಾ ಸಭೆಯನ್ನು ನಡೆಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಲ್ಹಾದ್ ಜೋಶಿ, ಸಭೆಯಲ್ಲಿ ಹುಬ್ಬಳ್ಳಿ–ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲ್ವೆ ಯೋಜನೆಗಳು, ಹೊಸ ಮಾರ್ಗಗಳು, ನಿಲ್ದಾಣಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ
ಸಭೆಯಲ್ಲಿ ಪ್ರಮುಖವಾಗಿ, ಹುಬ್ಬಳ್ಳಿಯಲ್ಲಿ ಉದ್ದೇಶಿತ ‘ಮೆಗಾ ಟರ್ಮಿನಲ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅದರ ಸ್ಥಳ ಆಯ್ಕೆ, ಜೊತೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಕುರಿತಂತೆ ಚರ್ಚೆ ನಡೆಯಿತು. ಇದೇ ವೇಳೆ, ಹುಬ್ಬಳ್ಳಿ–ಅಂಕೋಲಾ ಹೊಸ ರೈಲು ಮಾರ್ಗ, ‘ಅಮೃತ್ ಭಾರತ್’ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ರೈಲು ನಿಲ್ದಾಣಗಳ ಪ್ರಗತಿ ಪರಿಶೀಲಿಸಲಾಯಿತು.
ಅದೇ ರೀತಿ, ತುಮಕೂರು–ಚಿತ್ರದುರ್ಗ–ದಾವಣಗೆರೆ ಹೊಸ ರೈಲು ಮಾರ್ಗ ಹಾಗೂ ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಈ ಯೋಜನೆಗಳು ಉತ್ತರ ಕರ್ನಾಟಕದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ: Grok AI: ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ
ಕುಸುಗಲ್–ಅಮರಗೋಳ ರೈಲ್ವೆ ಬೈಪಾಸ್ ಲೈನ್‌ನ ಸರ್ವಿಸ್ ರಸ್ತೆ ಸಮಸ್ಯೆ, ಹಾಗೂ ಶಿಶುವಿನಹಳ್ಳಿ–ಅಣ್ಣಿಗೇರಿ–ಹುಲಕೋಟಿ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಧಾರವಾಡ–ಗದಗ ನಡುವೆ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.
ಇದಲ್ಲದೆ, ಅಮರಗೋಳ ಸಮೀಪದ ಸೇತುವೆ ಸಂಖ್ಯೆ 289 ರಿಂದ 291 ರವರೆಗೆ ರೈತರು ತಮ್ಮ ಜಮೀನುಗಳಿಗೆ ಸುಲಭವಾಗಿ ತಲುಪಲು ಸರ್ವಿಸ್ ರಸ್ತೆ ಒದಗಿಸುವುದು, ಭೂಸ್ವಾಧೀನದ ಪ್ರಗತಿ, ಹಾಗೂ ಧಾರವಾಡದ ಗಾಂಧಿನಗರದಲ್ಲಿ ಪಾದಚಾರಿಗಳ ಸುರಕ್ಷತೆಗೆ ಕೆಳಸೇತುವೆ (RUB) ನಿರ್ಮಾಣ ಕುರಿತ ವಿಷಯಗಳನ್ನೂ ಸಭೆಯಲ್ಲಿ ಪ್ರಾಮುಖ್ಯತೆಯಿಂದ ಚರ್ಚಿಸಲಾಯಿತು.
ಉತ್ತರ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಜನಸಾಮಾನ್ಯರು, ರೈತರು ಮತ್ತು ಪ್ರಯಾಣಿಕರ ಅನುಕೂಲಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.






















