ಹುಟ್ಟುತ್ತಲೇ ಬದುಕಿಗೆ ಹೋರಾಡಿದ ಕಂದಮ್ಮ ಇನ್ನಿಲ್ಲ

0
30

ಐದು ಆಂಬ್ಯುಲೆನ್ಸ್‌, ಝೀರೋ ಟ್ರಾಫಿಕ್‌ – ಜೀವ ಉಳಿಸಲು ಹೋರಾಟ

ಹುಬ್ಬಳ್ಳಿ: ಹೆರಿಗೆ ವೇಳೆ ನವಜಾತ ಶಿಶುವಿನ ಕರುಳುಗಳು ದೇಹದ ಹೊರಗೆ ಬಂದಿದ್ದ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ ವೈದ್ಯರ ಸತತ ಪ್ರಯತ್ನಗಳು ಕೊನೆಗೂ ಫಲ ನೀಡದೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶು ಮೃತಪಟ್ಟಿದೆ. ಮಗುವಿನ ಜೀವ ಉಳಿಸಲು ನಡೆದ ಹಲವಾರು ಪ್ರಯತ್ನಗಳ ನಡುವೆಯೇ ಈ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕುಕನೂರ ತಾಲ್ಲೂಕಿನ ಗುತ್ತೂರ ಗ್ರಾಮದ ಮಲ್ಲಪ್ಪ–ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ಜನನದ ಕ್ಷಣದಲ್ಲೇ ಮಗುವಿನ ಕರುಳುಗಳು ಸಂಪೂರ್ಣವಾಗಿ ಹೊರಗೆ ಬಂದಿದ್ದವು (Congenital defect). ಪರಿಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ವೈದ್ಯರು, ತುರ್ತು ಶಸ್ತ್ರಚಿಕಿತ್ಸೆ ಅಗತ್ಯವೆಂದು ತಿಳಿಸಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸುವಂತೆ ಸೂಚಿಸಿದ್ದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಐದು ಆಂಬ್ಯುಲೆನ್ಸ್‌, ಝೀರೋ ಟ್ರಾಫಿಕ್‌ – ಜೀವ ಉಳಿಸಲು ಹೋರಾಟ: ಮಗುವಿನ ಸ್ಥಿತಿ ಅತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ, ತಾಯಿ ಮತ್ತು ಶಿಶುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ ಐದು ಆಂಬ್ಯುಲೆನ್ಸ್‌ಗಳ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕರೆತರಲಾಯಿತು. ಈ ವೇಳೆ ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಅವರ ಸಮಯಪ್ರಜ್ಞೆ ಹಾಗೂ ಪೊಲೀಸರ ಸಹಕಾರದಿಂದ ಸಂಚಾರ ಸುಗಮಗೊಳಿಸಲಾಗಿತ್ತು. ವೈದ್ಯರು ಶಿಶುವಿಗೆ ಕಿಡ್ನಿ ಸಂಬಂಧಿತ ಸಮಸ್ಯೆಯೂ ಇದೆ ಎಂದು ತಿಳಿಸಿದ್ದರಿಂದ, ಜನಿಸಿದ ಕೆಲವೇ ಗಂಟೆಗಳಲ್ಲಿ ಮಗುವನ್ನು ಹುಬ್ಬಳ್ಳಿಗೆ ತಲುಪಿಸಲು ಮಾನವೀಯ ಪ್ರಯತ್ನ ನಡೆಯಿತು.

ಕಿಮ್ಸ್ ವೈದ್ಯರ ಸತತ ಶ್ರಮವೂ ವಿಫಲ: ಕಿಮ್ಸ್ ಆಸ್ಪತ್ರೆಯಲ್ಲಿ ಶಿಶುವನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ, ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ಸಾಧ್ಯ ಚಿಕಿತ್ಸೆಯನ್ನು ವೈದ್ಯರು ಕೈಗೊಂಡರು. ಆದರೆ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಿಶು ಚಿಕಿತ್ಸೆ ಫಲಿಸದೆ ಮಂಗಳವಾರ ತಡರಾತ್ರಿ ಕೊನೆಯುಸಿರೆಳೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Previous articleಕಸದ ನರಕದಲ್ಲಿ ಮುಳುಗಿದ್ದ ಶಾಲೆಗೆ ತುಳಸಿ ಸ್ಪರ್ಶ… !