ನೇಹಾ ಹತ್ಯೆ: ಜಾಮೀನು ಅರ್ಜಿ ವಜಾ, ಹಂತಕನಿಗೆ ಜೈಲೂಟವೇ ಗತಿ

0
112

ಹುಬ್ಬಳ್ಳಿ: ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.

ಎಪ್ರಿಲ್‌ 18, 2024ರಂದು ಸಂಜೆಯ ವೇಳೆಗೆ ಕಾಲೇಜ್‌ ಕ್ಯಾಂಪಸ್‌ನಲ್ಲಿಯೇ ನೇಹಾ ಹಿರೇಮಠ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿ ಫಯಾಜ್ ಕೊಂಡುನಾಯ್ಕನ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.

ಫಯಾಜ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ್ದ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶವನ್ನು ಆ. 4ಕ್ಕೆ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.

ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್ ಅವರು ಆದೇಶವನ್ನು ಪ್ರಕಟಿಸಿದ್ದಾರೆ. ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದ ಫೈಯಾಜ್ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಫಯಾಜ್‌ಗೆ ಆಗಸ್ಟ್‌ 6 ರಂದು ಖುದ್ದು ಹಾಜರಾಗಲು ಕೋರ್ಟ್‌ ಸೂಚಿಸಿದೆ.

ನೇಹಾ ಹಿರೇಮಠ ಅವರ ತಾಯಿ ಗೀತಾ ನಿರಂಜನ ಹಿರೇಮಠ ಫಿರ್ಯಾದಿದಾರರು ಆಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಸೆಕ್ಷನ್‌ಗಳ ಪ್ರಕಾರ ಫಿರ್ಯಾದಿದಾರರ ಪರ ವಕೀಲರಾದ ರಾಘವೇಂದ್ರ ಮುತಗೀಕರ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ವಾದವನ್ನೂ ಮಂಡಿಸಿದ್ದಾರೆ. ವಾದ-ವಿವಾದಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಆಗಸ್ಟ್ 4ಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು.

ಕಾಲೇಜು ಆವರಣದಲ್ಲೇ ಕೊಲೆ: ಎಪ್ರಿಲ್‌ 18, 2024ರಂದು ಸಂಜೆ 4.30ರ ಸುಮಾರಿಗೆ ಹುಬ್ಬಳ್ಳಿ ವಿದ್ಯಾನಗರದ ಬಿ ವಿ ಭೂಮರಡ್ಡಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಕಾಲೇಜಿಗೆ ಬಂದಿದ್ದ ನೇಹಾ ಹಿರೇಮಠಳನ್ನು ಫಯಾಜ್‌ ಭೀಕರವಾಗಿ ಕೊಲೆ ಮಾಡಿದ್ದ.

ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಯುವಕ, ಯುವತಿ ಕಾಲೇಜಿಗೆ ಬಂದಿರುವ ಸುಳಿವರಿತು ಕಾಲೇಜಿಗೆ ಆಗಮಿಸಿ, ಮರಳಿ ಮನೆಗೆ ತೆರಳುವ ವೇಳೆ ಕಾಲೇಜು ಆವರಣದಲ್ಲೇ ಚಾಕುವಿನಿಂದ ಸುಮಾರು 9 ಬಾರಿ ಇರಿದು ಕೊಲೆ ಮಾಡಿದ್ದ. ಕುತ್ತಿಗೆ ಭಾಗದಲ್ಲಿ ತೀವ್ರವಾಗಿ ಇರಿದಿರುವುದರಿಂದ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಕೊನೆ ಉಸಿರು ಎಳೆದಿದ್ದಳು.

ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು: ನೇಹಾ ಕೊಲೆ ಹಿಂದೆ ಶಾಸಕರ ಕೈವಾಡವಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನೇಹಾಳ ತಂದೆ ನಿರಂಜನ್​ ಹಿರೇಮಠ ಈ ಹಿಂದೆಯೇ ಆಗ್ರಹಿಸಿದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡರಾಗಿರುವ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನ ಫಯಾಜ್‌ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಕೊಲೆ ಮಾಡಿದ್ದ ಎಂದು ಹೇಳಲಾಗಿತ್ತು. ಕೊಲೆ‌ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕೊಲೆ ಆರೋಪಿ ಫಯಾಜ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ನೇಹಾ ಕೊಲೆ ಪ್ರಕರಣ ರಾಜ್ಯ ಸರ್ಕಾರಕ್ಕೆ ದೊಡ್ಡ ಇರಿಸು ಮುರಿಸು ಉಂಟು ಮಾಡಿತ್ತು. ಕಾಲೇಜು ಆವರಣದಲ್ಲಿಯೇ ಭೀಕರ್‌ ಕೊಲೈಗೈದಿದ್ದನ್ನು ಖಂಡಿಸಿ ಅನೇಕ ಸಂಘಟನೆಗಳು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ವೇಳೆ ನಿರಂಜನ್​ ಹಿರೇಮಠ ಕೂಡ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದರು.

Previous article100 ಕೋಟಿ ಕ್ಲಬ್ ಸೇರಿದ ಕನ್ನಡಿಗರ ಸಿನಿಮಾ ‘ಮಹಾವತಾರ ನರಸಿಂಹ’
Next articleKSRTC: ಮಾತುಕತೆ ಭರವಸೆ, ಮುಷ್ಕರ ವಾಪಸ್‌ಗೆ ಕರೆ. ಮಂಗಳವಾರ ಬಸ್ ಇರುತ್ತೋ, ಇಲ್ವೋ?

LEAVE A REPLY

Please enter your comment!
Please enter your name here