Home Advertisement
Home ನಮ್ಮ ಜಿಲ್ಲೆ ಧಾರವಾಡ ಮಕ್ಕಳ ಭವಿಷ್ಯ vs ಡಿಜಿಟಲ್ ಯುಗ: ಮೊಬೈಲ್ ಬಳಕೆಗೆ ಮಿತಿ ಬೇಕೇ?

ಮಕ್ಕಳ ಭವಿಷ್ಯ vs ಡಿಜಿಟಲ್ ಯುಗ: ಮೊಬೈಲ್ ಬಳಕೆಗೆ ಮಿತಿ ಬೇಕೇ?

0
44
ಮೊಬೈಲ್ ನಿಷೇಧ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಶಿಕ್ಷಣ ತಜ್ಞರು, ಪಾಲಕರು ಮತ್ತು ಖಾಸಗಿ ಶಾಲೆಗಳ ಅಭಿಪ್ರಾಯಗಳ ಸಂಪೂರ್ಣ ವರದಿ ನಿಮ್ಮ ನೆಚ್ಚಿನ ಪತ್ರಿಕೆ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್? ನಿಯಂತ್ರಿತ ಬಳಕೆಯೇ? ರಾಜ್ಯದಲ್ಲಿ ಗಂಭೀರ ಚರ್ಚೆ

ಹುಬ್ಬಳ್ಳಿ/ಬೆಂಗಳೂರು: 16 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣವಾಗಿ ಮೊಬೈಲ್ ನಿಷೇಧ ಮಾಡಬೇಕೆ? ಅಥವಾ ನಿಯಂತ್ರಿತ ಬಳಕೆ ಸಾಕೆ? ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಅಡಿಕ್ಷನ್, ಗಮನಾಭಾವ, ಮನೋವೈಕಲ್ಯ ಸಮಸ್ಯೆಗಳು ಪೋಷಕರಲ್ಲಿ ಆತಂಕ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇದರ ನಡುವೆ ಖಾಸಗಿ ಶಾಲೆಗಳಿಂದ ಮೊಬೈಲ್ ಬ್ಯಾನ್‌ಗೆ ವಿರೋಧ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿಗಳ ಪಾಲಕರು, ಮನೋರೋಗತಜ್ಞರು ಸಂಯುಕ್ತ ಕರ್ನಾಟಕದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಶೇಷ ಪುಟ ಇಂದು ನಿಮ್ಮ ನೆಚ್ಚಿನ ಪತ್ರಿಕೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ.

ಕೋವಿಡ್ ಬಳಿಕ ಹೆಚ್ಚಿದ ಮೊಬೈಲ್ ಅವಲಂಬನೆ: ಕೋವಿಡ್-19 ಮಹಾಮಾರಿಯ ಸಮಯದಲ್ಲಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದ್ದರಿಂದ, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಫೋನ್ ಪ್ರಮುಖ ಸಾಧನವಾಗಿತ್ತು. ಶಾಲಾ ಪಾಠಗಳು, ಹೋಂವರ್ಕ್, ಪರೀಕ್ಷೆಗಳು ಎಲ್ಲವೂ ಡಿಜಿಟಲ್ ವೇದಿಕೆಗಳಲ್ಲಿ ನಡೆಯುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ದಿನನಿತ್ಯದ ಅಭ್ಯಾಸವಾಗಿ ಬದಲಾಗಿದೆ.

ಇದನ್ನೂ ಓದಿ: ಮಹಿಳಾ ಆರೋಗ್ಯಕ್ಕೆ ಬೃಹತ್ ರಕ್ಷಣಾ ಕವಚ: ದೇಶಾದ್ಯಂತ HPV ಲಸಿಕಾ ಅಭಿಯಾನ

ಶಿಕ್ಷಣ ತಜ್ಞರ ಪ್ರಕಾರ, ಕೋವಿಡ್ ನಂತರವೂ ಆನ್‌ಲೈನ್ ಕಲಿಕೆಯ ಕೆಲವು ಪದ್ಧತಿಗಳು ಮುಂದುವರಿದಿವೆ. ಆದರೆ ಇದೇ ಸಂದರ್ಭದಲ್ಲಿ ಗೇಮಿಂಗ್, ಸೋಶಿಯಲ್ ಮೀಡಿಯಾ, ಅನಗತ್ಯ ವೀಡಿಯೋ ವೀಕ್ಷಣೆ ಮುಂತಾದ ಚಟುವಟಿಕೆಗಳು ಮಕ್ಕಳಲ್ಲಿ ಹೆಚ್ಚಾಗಿವೆ.

ರಾಜ್ಯ ಸರ್ಕಾರದ ಗಂಭೀರ ಚಿಂತನೆ: ರಾಜ್ಯ ಸರ್ಕಾರವು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಅಥವಾ ಸಂಪೂರ್ಣ ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಭೆ ನಡೆಸಿ ಸ್ವತಃ ಮುಖ್ಯಮಂತ್ರಿ ಅಭಿಪ್ರಾಯ ಪಡೆದಿದ್ದಾರೆ.

ಸರ್ಕಾರದ ವಲಯಗಳಲ್ಲಿ, “ಕಲಿಕೆಯಲ್ಲಿ ಆಸಕ್ತಿ ಕುಗ್ಗುತ್ತಿದೆ, ತರಗತಿಯಲ್ಲಿ ಗಮನ ಬೇರೆಡೆ ತಿರುಗುತ್ತಿದೆ” ಎಂಬ ಅಂಶಗಳು ಪ್ರಸ್ತಾಪಗೊಂಡಿವೆ. ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಸಾಮಾಜಿಕ ವರ್ತನೆ ಮೇಲೆ ಮೊಬೈಲ್ ದುಷ್ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ʻಹಿಮೋಫಿಲಿಯಾ’ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌

ಖಾಸಗಿ ಶಾಲೆಗಳ ವಿರೋಧ: ಆದರೆ ಖಾಸಗಿ ಶಾಲೆಗಳ ನಿರ್ವಹಣಾ ಮಂಡಳಿಗಳು ಮೊಬೈಲ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿವೆ. ಅವರ ಪ್ರಕಾರ, ಡಿಜಿಟಲ್ ಯುಗದಲ್ಲಿ ಸಂಪೂರ್ಣ ನಿಷೇಧ ವಾಸ್ತವಿಕವಲ್ಲ. “ಡಿಜಿಟಲ್ ಸಾಕ್ಷರತೆ ಕೂಡ ಶಿಕ್ಷಣದ ಭಾಗವೇ ಆಗಿದೆ. ನಿಯಂತ್ರಿತ ಮತ್ತು ಮಾರ್ಗದರ್ಶಿತ ಬಳಕೆ ಉತ್ತಮ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನೋರೋಗ ತಜ್ಞರ ಎಚ್ಚರಿಕೆ: ಮನೋರೋಗ ತಜ್ಞರು ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ನಿರಂತರ ಸ್ಕ್ರೀನ್ ಟೈಮ್ ಮಕ್ಕಳ ನಿದ್ರೆ ಚಕ್ರ, ಕಣ್ಣುಗಳ ಆರೋಗ್ಯ, ಸಾಮಾಜಿಕ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಆದರೆ ಸಂಪೂರ್ಣ ನಿಷೇಧವು ಮಕ್ಕಳಲ್ಲಿ ವಿರೋಧ ಮನೋಭಾವ ಉಂಟುಮಾಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಕೇರಳ’ದ ಹೆಸರು ಬದಲಾವಣೆ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಪೋಷಕರಲ್ಲಿ ದ್ವಂದ್ವ: ಪಾಲಕರಲ್ಲಿ ಈ ಕುರಿತು ಭಿನ್ನಾಭಿಪ್ರಾಯವಿದೆ. ಕೆಲವರು “ಪೂರ್ಣ ನಿಷೇಧವೇ ಸರಿಯಾದ ಕ್ರಮ” ಎಂದು ವಾದಿಸುತ್ತಿದ್ದರೆ, ಇನ್ನೂ ಕೆಲವರು “ಮಿತಿಯೊಳಗಿನ ಬಳಕೆ ಮತ್ತು ಪೋಷಕರ ಮೇಲ್ವಿಚಾರಣೆ ಸಾಕು” ಎಂದು ಹೇಳುತ್ತಿದ್ದಾರೆ.

ಸಮತೋಲನದ ಮಾರ್ಗವೇ ಪರಿಹಾರ?: ಶಿಕ್ಷಣ ತಜ್ಞರ ಒಕ್ಕೂಟದ ಅಭಿಪ್ರಾಯ ಪ್ರಕಾರ, ಸಂಪೂರ್ಣ ನಿಷೇಧಕ್ಕಿಂತ ನಿಯಂತ್ರಿತ ಬಳಕೆ, ಡಿಜಿಟಲ್ ಜಾಗೃತಿ, ಪೋಷಕರ ಪಾಲ್ಗೊಳ್ಳಿಕೆ ಮತ್ತು ಶಾಲಾ ಮಟ್ಟದ ಸ್ಪಷ್ಟ ಮಾರ್ಗಸೂಚಿಗಳು ಉತ್ತಮ ಪರಿಹಾರವಾಗಬಹುದು.

ಇದನ್ನೂ ಓದಿ: ಧಾರವಾಡ ಪ್ರತಿಭಟನೆ: ಉದ್ಯೋಗಾಕಾಂಕ್ಷಿಗಳೊಂದಿಗೆ ಸರ್ಕಾರ ದೃಢವಾಗಿ ನಿಂತಿದೆ – ಸಿಎಂ ಭರವಸೆ

ಮಕ್ಕಳ ಭವಿಷ್ಯ, ಮಾನಸಿಕ ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಸರ್ಕಾರದ ಅಂತಿಮ ನಿರ್ಧಾರ ಕಾದು ನೋಡಬೇಕಾಗಿದೆ.

Previous articleಯುವಕರಿಗೆ ಬೇಕಿರುವುದು ವಾಗ್ದಾನ ಅಲ್ಲ, ನೇಮಕಾತಿ ಆದೇಶ ಪತ್ರ
Next articleಮಕ್ಕಳ ರಕ್ಷಣೆ: ಅಸಭ್ಯ ವಿಷಯ ಪ್ರಸಾರ ಮಾಡಿದ 5 OTTಗಳು ಬ್ಯಾನ್