ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ನಡೆದ ದಾಳಿಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನಡೆದ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಸಮಾಜ-ಸಂವಿಧಾನದಲ್ಲಿ ಇಂತಹ ಕೃತ್ಯ ಅಕ್ಷಮ್ಯವಾಗಿದೆ. ಗವಾಯಿ ಅವರು ತಮ್ಮ ಮೇಲೆ ದಾಳಿ ನಡೆದರೂ ಶಾಂತಿ-ಸೌಹಾರ್ದತೆ ಮೆರೆದಿದ್ದಾರೆ. ಇದು ನ್ಯಾಯಾಂಗದ ಮೌಲ್ಯವನ್ನು ಹೆಚ್ಚಿಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಘಟನೆಗೆ ಕಾರಣವಾದ ವಿವಾದಾತ್ಮಕ ಹೇಳಿಕೆ: ಈ ಘಟನೆಗೆ ಕಾರಣವಾದ ಹಿನ್ನೆಲೆಯನ್ನು ಅವಲೋಕಿಸಿದರೆ, ಇತ್ತೀಚೆಗೆ ಸಿಜೆಐ ಗವಾಯಿ ಖಜುರಾಹೊದಲ್ಲಿರುವ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೀಡಿದ್ದ ಹೇಳಿಕೆಯು ಪ್ರಮುಖವಾಗಿದೆ.
ಆ ಪ್ರಕರಣವನ್ನು ವಜಾಗೊಳಿಸುವಾಗ, ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಮೌಖಿಕವಾಗಿ, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ, ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಹೇಳಿದ್ದರು. ಈ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಅನೇಕ ಜನರು ಈ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು.