ಧಾರವಾಡ: ಅದು ಅಪರೂಪದ ಕಾರ್ಯಕ್ರಮ. ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭ ನಡೆಯಿತು. ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮ ಬಳಗವನ್ನು ಸತ್ಕರಿಸಲಾಯಿತು. ಇದು ಪತ್ರಕರ್ತರ ಸಂಘ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರೇರಣೆ ನೀಡಿತು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ವಿವಿಧ ಕ್ಷೇತ್ರದ ಸಾಧಕರನ್ನು ಜಿಲ್ಲಾಡಳಿತದಿಂದ ಪ್ರತಿ ವರ್ಷ ಸನ್ಮಾನಿಸಲಾಗುತ್ತದೆ ಆದರೆ ಇದೇ ಮೊದಲ ಬಾರಿಗೆ ಪತ್ರಕರ್ತ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತಿದೆ. ಸರಿಯಾದ ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮಾಧ್ಯಮದ ಅಗತ್ಯತೆ ಇದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮಾಧ್ಯಮ ಅವಶ್ಯಕ ಎಂದು ಹೇಳಿದರು.
ನಕಲಿ ಪತ್ರಕರ್ತರ ಹಾವಳಿ ಅತಿಯಾಗಿದೆ. ನಕಲಿ, ವಸೂಲಿ ಪತ್ರಕರ್ತರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸರ್ಕಾರಿ ನೌಕರರಲ್ಲಿ ಮಾಧ್ಯಮಗಳ ಮತ್ತು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರಿ ನೌಕರರಿಗೆ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
ಇದನ್ನೂ ಓದಿ: ತುರ್ತು ಪರಿಸ್ಥಿತಿಯ ನಂತರ ದೇಶ ಮತ್ತೊಮ್ಮೆ ಆತಂಕದಲ್ಲಿ
ಸಂಯುಕ್ತ ಕರ್ನಾಟಕ ಪತ್ರಿಕೆಯ ಸಿಇಒ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ ಹೆಗಡೆ ಮಾತನಾಡಿ, ಸ್ವಾತಂತ್ರ‍್ಯ ಹೋರಾಟ, ಕರ್ನಾಟಕ ಚಳವಳಿ, ಕರ್ನಾಟಕ ಶಬ್ದ ಉತ್ಪತ್ತಿ ಸೇರಿದಂತೆ ಹಲವು ಹೋರಾಟಗಳಿಗೆ ಧಾರವಾಡ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ಗೌರವ ಗುಪ್ತಾ, ದರ್ಪಣ್ ಜೈನ್ ಸೇರಿದಂತೆ ಹಲವು ಜಿಲ್ಲಾಧಿಕಾರಿಗಳು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ ಈಗಿನ ಜಿಲ್ಲಾಧಿಕಾರಿಗಳೂ ಜನಸ್ನೇಹಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಗ್ರಾಮೀಣ, ನಗರ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಇದೆ. ಅವರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಡು ಕುಲಕರ್ಣಿ ಮಾತನಾಡಿ, ಸೌಹಾರ್ದಯುತ ಸನ್ಮಾನ ಕಾರ್ಯಕ್ರಮ ನಿಜಕ್ಕೂ ಅಚ್ವರಿ ತಂದಿದೆ. ಇಲ್ಲಿಯ ನೆಲದ ಗುಣವೇ ಸೌಹಾರ್ದಯುತವಾಗಿ ಇರುವುದಾಗಿದೆ. ಪತ್ರಕರ್ತರ ಕಾರ್ಯಾಗಾರ ಹಮ್ಮಿಕೊಂಡರೆ ಜಿಲ್ಲಾಡಳಿತದೊಂದಿಗೆ ಸಂಘ ಕೈ ಜೋಡಿಸಲಿದೆ. ಅವರವರ ಜವಾಬ್ದಾರಿ ಅವರೇ ಮಾಡಿದರೆ ಉತ್ತಮ ಎಂದರು.
ಇದನ್ನೂ ಓದಿ: ಖ್ಯಾತ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ನಿಧನ
ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಸಿದ್ದಣ್ಣನವರ ಮಾತನಾಡಿ, ಒಳ್ಳೆಯ ಕಾರ್ಯಗಳಿಗೆ ಸಹಾಯ ಸಹಕಾರ ನೀಡುತ್ತೇವೆ. ಕ್ರಿಯಾಶೀಲ ಅಧಿಕಾರಿಗಳಿಗೆ ಎಲ್ಲ ರೀತಿಯ ವಾತಾವರಣ ಧಾರವಾಡದಲ್ಲಿದೆ. ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಅಸಹಾಯಕರಿಗೆ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡಬೇಕು. ಕ್ರಿಯಾಶೀಲ ಪ್ರತಕರ್ತರು ಜಿಲ್ಲೆಯಲ್ಲಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆ, ಬಜೆಟ್ ಸೇರಿದಂತೆ ವಿವಿಧ ವಿಷಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಜನರ ಸಮಸ್ಯೆಗಳನ್ನು ನಮಗೆ ತಿಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಘನತೆ, ಸ್ಥಾನವಿದೆ. ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಸುದ್ದಿಗಳಿಗೆ ಯಾವುದೇ ರೀತಿಯ ಗಟ್ಟಿತನ ಇಲ್ಲ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ವಾಗತಿಸಿದರು. ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ವೆಂಕಟರಾಜು ಕೆ.ಜಿ., ಪ್ರಕಾಶ ಶೇಟ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಜೆ ಅಬ್ಬಾಸ್ ಮುಲ್ಲಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ ವೇದಿಕೆಯಲ್ಲಿ ಇದ್ದರು.
ಸಂಯುಕ್ತ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಹಿರಿಯ ಪತ್ರಕರ್ತರಾದ ಗಿರೀಶ ಪಟ್ಟಣಶೆಟ್ಟಿ, ವಿಠ್ಠಲದಾಸ್ ಕಾಮತ್, ವೆಂಕಟೇಶ ಪ್ರಭು, ರಾಹುಲ ಬೆಳಗಲಿ ಮೊದಲಾದವರು ಪಾಲ್ಗೊಂಡಿದ್ದರು. ಕಾವ್ಯಾ ಗೌಡರ ಪ್ರಾರ್ಥಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.






















