ಖೈದಿಗಳ ಸುಧಾರಣೆಗೆ ಹೊಸ ಕ್ರಮ – ರಾಜ್ಯದ ಜೈಲುಗಳಲ್ಲಿ ಬದಲಾವಣೆ: ಜೈಲಿನಲ್ಲೇ ಸ್ಕಿಲ್ ಡೆವಲಪ್‌ಮೆಂಟ್ – ಖೈದಿಗಳ ಭವಿಷ್ಯಕ್ಕೆ ಹೊಸ ದಾರಿ
ಹುಬ್ಬಳ್ಳಿ: ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಹಿನ್ನೆಲೆ ಹೊಂದಿರುವ ಖೈದಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ರಾಜ್ಯದ ಎಲ್ಲಾ ಜೈಲುಗಳಲ್ಲಿ ಹೊಸ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಹುಬ್ಬಳ್ಳಿಯ ಉಪಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿಗೆ ಪ್ರವೇಶಿಸುವಾಗ ಮತ್ತು ಬಿಡುಗಡೆಗೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯಕೀಯ ಹಾಗೂ ಮಾದಕ ವಸ್ತು ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.
ಇನ್ನೊಂದು ವಾರದೊಳಗೆ ರಾಜ್ಯದ ಪ್ರತಿಯೊಂದು ಜೈಲಿನಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: AI ಶೃಂಗಸಭೆ ವಿವಾದ: ರೋಬೋಟ್ ನಾಯಿಯ ಕುರಿತು ಗಾಲ್ಗೋಟಿಯಾಸ್ ವಿವಿ ಸ್ಪಷ್ಟನೆ
ಜೈಲಿನಲ್ಲಿ ಮಾದಕ ವಸ್ತುಗಳಿಗೆ ಸಂಪೂರ್ಣ ತಡೆ: ಜೈಲಿನೊಳಗೆ ಮಾದಕ ವಸ್ತುಗಳ ಪೂರೈಕೆ ಮತ್ತು ಬಳಕೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾರಾದರೂ ಕದ್ದುಮುಚ್ಚಿ ಗಾಂಜಾ ಅಥವಾ ಇತರೆ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೆ, ಅಥವಾ ಪೂರೈಕೆಗೆ ಸಿಬ್ಬಂದಿ ಸಹಕರಿಸಿರುವುದು ಕಂಡುಬಂದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಅಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದೂ ಸ್ಪಷ್ಟಪಡಿಸಿದರು.
ಖೈದಿಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ: ಜೈಲಿನಿಂದ ಹೊರಬರುವ ಖೈದಿಗಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಮರಳಬೇಕು ಎಂಬ ಉದ್ದೇಶದಿಂದ ಸುಧಾರಣಾ ಕ್ರಮಗಳನ್ನು ಜೈಲಿನೊಳಗೆ ಜಾರಿಗೊಳಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ
ಖೈದಿಗಳಿಗೆ ಪ್ರತಿದಿನ: ಯೋಗ, ಪ್ರಾಣಾಯಾಮ, ಧ್ಯಾನ, ವ್ಯಾಯಾಮ ಮಾಡಿಸಲಾಗುತ್ತಿದೆ. ಜೊತೆಗೆ, ಯಾವುದೇ ಕೌಶಲ್ಯ ಹೊಂದಿರುವವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ, ಬಿಡುಗಡೆ ನಂತರ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ: ಜೈಲಿನೊಳಗೆ ಖೈದಿಗಳಿಗೆ ಮೊಬೈಲ್ ಫೋನ್ ಬಳಸಲು ಯಾವುದೇ ಅವಕಾಶವಿಲ್ಲ. ಸಂಪೂರ್ಣ ನಿಷೇಧ ಜಾರಿಯಲ್ಲಿದೆ. ಮೊಬೈಲ್ ಬಳಕೆ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಜಿಪಿ ಎಚ್ಚರಿಸಿದರು. “ನಾನು ಡಿಜಿಪಿಯಾದ ಬಳಿಕ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಹಿಂದಿನ ಸ್ಥಿತಿಗತಿಯ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಸಾವಿರಾರು ವಿದ್ಯಾರ್ಥಿಗಳ ಮಾರ್ಗದರ್ಶಕ ಡಾ. ರಾಘವೇಂದ್ರ ರಾವ್ ಇನ್ನಿಲ್ಲ
ಯುವ ಖೈದಿಗಳಿಗೆ ಪ್ರತ್ಯೇಕ ವ್ಯವಸ್ಥೆ: ಮೊದಲ ಬಾರಿ ಅಪರಾಧ ಎಸಗಿ ಶಿಕ್ಷೆಗೆ ಗುರಿಯಾದ ಯುವ ಖೈದಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಹಳೇ ಖೈದಿಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದರಿಂದ ಯುವಕರು ಅಪರಾಧ ಲೋಕದ ಪ್ರಭಾವಕ್ಕೆ ಒಳಗಾಗದೆ ಸುಧಾರಣೆಯಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಹುಬ್ಬಳ್ಳಿ ಜೈಲಿನಲ್ಲಿ 132 ಖೈದಿಗಳು: ಪ್ರಸ್ತುತ ಹುಬ್ಬಳ್ಳಿ ಕಾರಾಗೃಹದಲ್ಲಿ ಕೊಲೆ, ಅತ್ಯಾಚಾರ, ಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 132 ಖೈದಿಗಳು ಇದ್ದಾರೆ. ಈ ಖೈದಿಗಳು ಬಿಡುಗಡೆಗೊಂಡ ಬಳಿಕ ಉತ್ತಮ ಜೀವನ ಕಟ್ಟಿಕೊಳ್ಳಲು ಪರಿವರ್ತನಾ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಡಿಜಿಪಿ ತಿಳಿಸಿದರು.
ಇದನ್ನೂ ಓದಿ: 45 ವರ್ಷಗಳ ಕೊಡುಗೆ ಏನು? ದೇಶಪಾಂಡೆಗೆ ಸುನೀಲ್ ಹೆಗಡೆ ಸವಾಲು
ಜೈಲಿನಲ್ಲೇ ಸ್ಕಿಲ್ ಡೆವಲಪ್‌ಮೆಂಟ್: ರಾಜ್ಯದ ಎಲ್ಲಾ ಜೈಲುಗಳಲ್ಲಿ ಖೈದಿಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ಜೈಲಿನಲ್ಲಿಯೇ ಸ್ಕಿಲ್ ಡೆವಲಪ್‌ಮೆಂಟ್ ಮೂಲಕ ಅವರ ಭವಿಷ್ಯಕ್ಕೆ ದಾರಿ ಮಾಡಿಕೊಡಲಾಗುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು.
























