ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಗೋಕುಲ, ಗಾಮನಗಟ್ಟಿ ಜನರಲ್ಲಿ ಆತಂಕ

0
6

ತಾರಿಹಾಳ–ಗಾಮನಗಟ್ಟಿ ರಸ್ತೆಯಲ್ಲಿ ಆತಂಕ, ಅರಣ್ಯ ಇಲಾಖೆ ಶೋಧ ಕಾರ್ಯ ತೀವ್ರ

ಹುಬ್ಬಳ್ಳಿ: ತಾರಿಹಾಳ ಬ್ರಿಡ್ಜ್‌ನಿಂದ ಗಾಮನಗಟ್ಟಿಗೆ ಸಂಪರ್ಕ ಕಲ್ಪಿಸುವ ವಿಮಾನ ನಿಲ್ದಾಣದ ಹಿಂಬದಿಯ ರಸ್ತೆಯಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿರುವುದು ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳ ಮೊಬೈಲ್ ಫೋನ್‌ಗಳಲ್ಲಿ ಚಿರತೆಯ ಓಡಾಟದ ದೃಶ್ಯಗಳು ಸೆರೆಯಾಗಿದ್ದು, ಈ ಮೂಲಕ ಕಳೆದ ಕೆಲ ದಿನಗಳಿಂದ ಹರಡಿದ್ದ ಅನುಮಾನಗಳು ಇದೀಗ ದೃಢಪಟ್ಟಿವೆ.

ಇದೇ ಚಿರತೆ ಗೋಕುಲ್ ರೋಡ್ ವ್ಯಾಪ್ತಿಯ ರೇಣುಕಾ ನಗರದಲ್ಲಿಯೂ ಕಾಣಿಸಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಸಂಚಾರದ ಅನುಮಾನ ವ್ಯಕ್ತವಾಗುತ್ತಲೇ ಇತ್ತು. ಆದರೆ ಯಾವುದೇ ದೃಢವಾದ ಸಾಕ್ಷ್ಯ ಲಭ್ಯವಾಗಿರಲಿಲ್ಲ. ಮಂಗಳವಾರ ಮೊಬೈಲ್ ವೀಡಿಯೋ ದೃಶ್ಯಗಳು ಲಭ್ಯವಾದ ನಂತರ ಚಿರತೆಯ ಇರುವಿಕೆ ಅಧಿಕೃತವಾಗಿ ದೃಢಗೊಂಡಿದೆ.

ಚಿರತೆ ಕಾಣಿಸಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಪ್ರಾಣಿಯ ಸಂಚಾರವನ್ನು ದೃಢಪಡಿಸಿದೆ. ಆದರೆ, ಚಿರತೆ ಒಂದೇ ಸ್ಥಳದಲ್ಲಿ ನಿಂತುಕೊಳ್ಳದೇ ನಿರಂತರವಾಗಿ ಜಾಗ ಬದಲಿಸುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಾಮನಗಟ್ಟಿ ರಸ್ತೆಯ ಸಮೀಪ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ ಸುಮಾರು 1000 ಎಕರೆ ವಿಸ್ತೀರ್ಣದ ಪ್ರದೇಶವಿದ್ದು, ಅಲ್ಲಿ ಮಾನವ ಸಂಚಾರ ಬಹುತೇಕ ಇಲ್ಲದ ಕಾರಣ ಚಿರತೆ ಅಲ್ಲೇ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಗಾಮನಗಟ್ಟಿ ಗ್ರಾಮಕ್ಕೆ ತಲುಪುವ ಮಾರ್ಗದ ಎರಡೂ ಬದಿಗಳಲ್ಲೂ ನೂರಾರು ಎಕರೆ ಪ್ರದೇಶದಲ್ಲಿ ಎದೆಎತ್ತರದ ಬೆಳೆ ಬೆಳೆದಿರುವುದರಿಂದ, ಆ ಪ್ರದೇಶದಲ್ಲಿಯೂ ಚಿರತೆ ಅವಿತಿರುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ.

ಸಂತಸದ ಸಂಗತಿಯೆಂದರೆ, ಈವರೆಗೆ ಚಿರತೆ ಯಾರಿಗೂ ಹಾನಿ ಮಾಡಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಒಂದು ಕಡೆ ಕೇಜ್‌ನ್ನು ಸ್ಥಾಪಿಸಿದೆ. ಜೊತೆಗೆ ಡ್ರೋನ್ ಕ್ಯಾಮೆರಾ ಬಳಸಿ ಸುಮಾರು 7–8 ಕಿಲೋಮೀಟರ್ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ ಇದುವರೆಗೂ ಚಿರತೆಯ ನಿಖರ ಸುಳಿವು ಲಭ್ಯವಾಗಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ. ಸ್ಥಳೀಯರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ, ವಿಶೇಷವಾಗಿ ರಾತ್ರಿ ಸಮಯದಲ್ಲಿ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಚಿರತೆ ಸೆರೆಸಿಗುವವರೆಗೆ ಆತಂಕದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Previous articleನ್ಯೂಜಿಲೆಂಡ್ ವರ, ಚಳ್ಳಕೆರೆ ವಧು: ದಾವಣಗೆರೆಯಲ್ಲಿ ಅಪರೂಪದ ಹಿಂದೂ ಸಂಪ್ರದಾಯದ ಮದುವೆ