ಬಿ.ಅರವಿಂದ
ಹುಬ್ಬಳ್ಳಿ: ಉತ್ತರ, ಕಲ್ಯಾಣ (ಕೆಲ ಜಿಲ್ಲೆಗಳು) ಹಾಗೂ ಮಧ್ಯ ಕರ್ನಾಟಕವನ್ನು ರಾಜಧಾನಿಗೆ ತ್ವರಿತವಾಗಿ ಸಂಪರ್ಕಿಸಲು ಅತ್ಯವಶ್ಯಕವಾಗಿರುವ ಎರಡು ರೈಲ್ವೆ ಮಾರ್ಗಗಳಿಗೆ ಅನುಮೋದನೆ ದೊರಕಿದ್ದರೂ, ಬೆಂಗಳೂರು ಹತ್ತಿರವಾಗಲು ಇನ್ನೂ ಕೆಲ ವರ್ಷ ಕಾಯಲೇಬೇಕಾಗಿದೆ! ಬೆಳಗಾವಿ – ಧಾರವಾಡ ಹಾಗೂ ತುಮಕೂರು – ದಾವಣಗೆರೆ ನೇರ ಮಾರ್ಗಗಳ ಭೂಸ್ವಾಧೀನ ಸಮಸ್ಯೆಯಿಂದಾಗಿ ಎರಡೂ ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯುವ ಬಗ್ಗೆ ನೈಋತ್ಯ ರೈಲ್ವೆ ಉನ್ನತ ಅಧಿಕಾರಿಗಳಿಗೇ ಸ್ಪಷ್ಟತೆ ಇಲ್ಲದಾಗಿದೆ.
2,140 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ತುಮಕೂರು – ದಾವಣಗೆರೆ ನಡುವಿನ ಕಾಮಗಾರಿ ಶೇ. 16ರಷ್ಟು ಮಾತ್ರ ಭೌತಿಕ ಪ್ರಗತಿಯನ್ನು ಸಾಧಿಸಿದೆ. ಬೆಳಗಾವಿಯ ಸಂಸದರಾಗಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ ಯತ್ನಗಳ ಫಲವಾಗಿ ಮಂಜೂರಾಗಿರುವ 947 ಕೋಟಿ ಮೊತ್ತದ ಬೆಳಗಾವಿ-ಧಾರವಾಡ ಮಾರ್ಗ ಒಂದಿಂಚೂ ಪ್ರಗತಿಯನ್ನು ಕಂಡಿಲ್ಲ. ಈ ಎರಡೂ ಯೋಜನೆಗಳು 2027ಕ್ಕೆ ಮುಗಿಯಬೇಕಾಗಿತ್ತು.
ತುಮಕೂರು – ದಾವಣಗೆರೆ ಮಾರ್ಗದಲ್ಲಿ ಶೇ. 90ರಷ್ಟು ಭೂ ಸ್ವಾಧೀನ ಪೂರ್ಣಗೊಂಡಿದೆ. ಬೆಳಗಾವಿ – ಧಾರವಾಡ ಮಾರ್ಗದಲ್ಲಿ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಕೇವಲ 45 ಎಕರೆಯಷ್ಟು ಜಾಗದ ಸ್ವಾಧೀನ ಕಗ್ಗಂಟಾಗಿ ಪರಿಣಮಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಶೇ. 100ರಷ್ಟು ಸ್ವಾಧೀನ ಪ್ರಕ್ರಿಯೆ (ಸುಮಾರು 600 ಎಕರೆ) ಪೂರ್ಣಗೊಂಡಿದೆ.
ರೈಲ್ವೆ ವಿನ್ಯಾಸ ಮಾಡಿದ ಜಾಗದಲ್ಲೇ ಉದ್ಯಮ: ನೈಋತ್ಯ ರೈಲ್ವೆ ಎಂಜಿನಿಯರಿಂಗ್ ವಿಭಾಗ ಮೊದಲು ವಿನ್ಯಾಸ ಮಾಡಿದ್ದಂತೆ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಭೂಸ್ವಾಧೀನ ಆಗಬೇಕಾಗಿತ್ತು. ರಾಜ್ಯ ಸರ್ಕಾರವೂ ಇದಕ್ಕೆ ಒಪ್ಪಿತ್ತು. ಆದರೆ ಸರ್ಕಾರವೇ ವಿನ್ಯಾಸ ಒಪ್ಪಿದ ಮೇಲೆಯೂ, ಸರ್ಕಾರದ್ದೇ ಆದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈಲ್ವೆ ವಿನ್ಯಾಸ ಮಾಡಿದ್ದ ಜಾಗದಲ್ಲಿ ದೊಡ್ಡ ಉದ್ಯಮವೊಂದಕ್ಕೆ ಅನುಮತಿ ನೀಡಿತು ಅಲ್ಲದೇ, ಆ ಉದ್ಯಮ ತ್ವರಿತವಾಗಿ ಕಾರ್ಯಾರಂಭವನ್ನೂ ಮಾಡಿಬಿಟ್ಟಿತು!
ಈಗ ವಿನ್ಯಾಸವನ್ನು ಮಾರ್ಪಡಿಸಬೇಕಾಗಿದೆ. ಭೂ ಸ್ವಾಧೀನ ಮಾಡಿಕೊಟ್ಟರೆ ಹೊಸದಾಗಿ ವಿನ್ಯಾಸ ಮಾಡಿ, ಕೆಲಸ ಕೂಡಲೇ ಶುರುಮಾಡುತ್ತೇವೆ' ಎಂಬುದಾಗಿ ನೈಋತ್ಯ ರೈಲ್ವೆಯ ಉನ್ನತಾಧಿಕಾರಿಯೊಬ್ಬರುಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡುತ್ತ ವಸ್ತುಸ್ಥಿತಿ ವಿವರಿಸಿದ್ದಾರೆ.
ರಾಜಕೀಯವೇ ಕಾರಣ: ಬೆಳಗಾವಿ – ಧಾರವಾಡ ಮಾರ್ಗಕ್ಕೆ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಮಾತ್ರ ಭೂ ಸ್ವಾಧೀನ ಸಮಸ್ಯೆ ಉಳಿದುಕೊಂಡಿರುವುದಕ್ಕೆ ರಾಜ್ಯದ ರಾಜಕಾರಣಿಯೊಬ್ಬರು ಭೂ ಸ್ವಾಧೀನ ಸಮಸ್ಯೆಯನ್ನು ಬಗೆಹರಿಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಆರೋಪಿಸಿದ್ದಾರೆ.























