ನವದೆಹಲಿ: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ಕಲಾ ಸರಸ್ವತಿ ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ʻಕರ್ನಾಟಕ ರತ್ನ’ ಮರಣೋತ್ತರ ಪ್ರಶಸ್ತಿ ನೀಡಿರುವುದನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾದಲ್ಲಿ ಮನೋಜ್ಞ ಅಭಿನಯ ಮೂಲಕ ನಾಯಕ ನಟನಾಗಿ ತೆರೆಯಲ್ಲಿ ಕಾಣಿಸಿಕೊಂಡ ವಿಷ್ಣುವರ್ಧನ್ ಕರುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಎಂದು ಜೋಶಿ ಸ್ಮರಿಸಿದ್ದಾರೆ.
ಕನ್ನಡ ಚಿತ್ರರಂಗದ ʻಯಜಮಾನ’ನಂತಿದ್ದ ಬಹುಭಾಷಾ ನಾಟ ಡಾ.ವಿಷ್ಣುವರ್ಧನ್ ಹಾಗೂ ವಿವಿಧ ಭಾಷೆಗಳಲ್ಲಿನ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕಲಾ ಸರಸ್ವತಿಯೆಂದೇ ಪ್ರಸಿದ್ಧಿಯಾಗಿದ್ದ ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಅಂತೂ ರಾಜ್ಯ ಸರ್ಕಾರದ ಅತ್ಯುನ್ನತ ಪುರಸ್ಕಾರ ʻಕರ್ನಾಟಕ ರತ್ನ’ ಘೋಷಣೆ ಖುಷಿಯ ವಿಚಾರವೆಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.