ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಹೊರಡಿಸಿದ್ದ ಆದೇಶಕ್ಕೆ ದೊಡ್ಡ ತಿರುವು ದೊರೆತಿದೆ. ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಈ ಆದೇಶವನ್ನು ರದ್ದುಗೊಳಿಸಿ, ಜನೌಷಧಿ ಕೇಂದ್ರಗಳಿಗೆ ದೊಡ್ಡ ನಿರಾಳತೆ ನೀಡಿದೆ.
ರಾಕೇಶ್ ಮಹಾಲಿಂಗಪ್ಪ ಎಲ್ ಮತ್ತು ಇತರರಿಂದ ಸಲ್ಲಿಸಲಾದ ಸಾರ್ವಜನಿಕ ಹಿತ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಮೇ 14ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ನಿಯಮತ: ಅಸಂಗತ ಎಂದು ತೀರ್ಪು ನೀಡಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ನೀಡಿದ್ದ ಸೂಚನೆಐ ಆದೇಶವನ್ನು ರದ್ದುಗೊಳಿಸಿ ಮೌಖಿಕ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರ ಜನೌಷಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲವು ಕೇಂದ್ರಗಳು ನಿಯಮ ಪಾಲಿಸುತ್ತಿಲ್ಲ, ಲೈಸೆನ್ಸ್ ನವೀಕರಣ ಸಮಸ್ಯೆ, ಒಪ್ಪಂದ ಉಲ್ಲಂಘನೆ ಮುಂತಾದ ಕಾರಣಗಳನ್ನು ಉಲ್ಲೇಖಿಸಿ, ಸರ್ಕಾರಿ ಆಸ್ಪತ್ರೆಗಳ ಒಳಾಂಗಣದಲ್ಲಿನ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.
ಈ ನಿರ್ಧಾರಕ್ಕೆ ವಿರೋಧವಾಗಿ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ಹೈಕೋರ್ಟ್ ಬಾಗಿಲು ತಟ್ಟಿದ್ದರು.
ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ: ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿ ಈ ಸರ್ಕಾರದ ನಿರ್ಧಾರದಿಂದ ಬಡವರು, ಮಧ್ಯಮ ವರ್ಗದವರು, ಜನರು ಆಸ್ಪತ್ರೆಗೆ ಬಂದು ಕಷ್ಟಪಟ್ಟು ಪಡೆಯುತ್ತಿದ್ದ ಕಡಿಮೆ ದರದ ಔಷಧಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು. ಹೈಕೋರ್ಟ್ ಇಂದು ನ್ಯಾಯ ನೀಡಿದೆ. ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರ್ಕಾರದ ಕ್ರಮ ಜನವಿರೋಧಿ ಕಾರ್ಯವಾಗಿತ್ತು. ಅವರ ಪ್ರಕಾರ, ಕಾಂಗ್ರೆಸ್ ಸರ್ಕಾರ ಜನೌಷಧಿ ಯೋಜನೆಯನ್ನು ರಾಜಕೀಯ ಕಾರಣಕ್ಕಾಗಿ ಟಾರ್ಗೆಟ್ ಮಾಡಿತ್ತು ಹಾಗೂ ಕೇಂದ್ರ ಯೋಜನೆಗಳ ವಿರುದ್ಧ ದ್ವೇಷದಿಂದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜನೌಷಧಿ ಕೇಂದ್ರಗಳ ಮಹತ್ವ: ಕರ್ನಾಟಕದಲ್ಲಿ ಪ್ರಸ್ತುತ 200ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಜನರಿಗೆ ಮಾರುಕಟ್ಟೆ ಬೆಲೆಯ 50%–90% ಕಡಿಮೆ ದರದಲ್ಲಿ ಔಷಧ ಸಿಗುತ್ತದೆ. ವರ್ಷಕ್ಕೆ ಲಕ್ಷಾಂತರ ಜನರು ಇದರ ಪ್ರಯೋಜನ ಪಡೆಯುತ್ತಾರೆ
ಹೀಗಾಗಿ ಹೈಕೋರ್ಟ್ ತೀರ್ಪು ರಾಜ್ಯದ ಜನರಿಗೆ ಹಾಗೂ ಜನೌಷಧಿ ಕೇಂದ್ರಗಳಿಗೂ ದೊಡ್ಡ ಜಯವಾಗಿದೆ.























