ಹಿಂದೂ ಎನ್ನದ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಲಿ: ಯತ್ನಾಳ

0
3

ಹುಬ್ಬಳ್ಳಿ: ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು, ಬಿಳಿ ಬಟ್ಟೆ ಧರಿಸಲಿ. ಅಂತಹ ಸ್ವಾಮೀಜಿ ನಮಗೆ ಬೇಕಾಗಿಲ್ಲ. ಬಿಜೆಪಿಯಿಂದ ಹಿಂದೂ ಧರ್ಮದ ಹೆಸರು ಹೇಳಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಪಕ್ಷ ಬಿಟ್ಟು ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಎರಡು ಒಂದೇ ಆಗಿದ್ದು, ಆಚರಣೆ ಸಹ ಸಮನಾಗಿದೆ. ಕೆಲವು ಸ್ವಾಮಿಗಳು ಉದ್ದೇಶ ಪೂರ್ವಕವಾಗಿ, ತಮ್ಮ ಸ್ವಾರ್ಥಕ್ಕೆ ಕಂದಕ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಮ್ಯುನಿಸ್ಟ್ ಮೈಂಡೆಡ್ ಸ್ವಾಮಿಗಳು ಸಂಚು, ಪಿತೂರಿ ರೂಪಿಸಿದ್ದಾರೆ. ಹಿಂದೂ ಎಂಬುವುದಕ್ಕೆ ಅಪಮಾನ ಮಾಡುವುದೇ ಇವರ ಕೆಲಸವಾಗಿದೆ. ಈ ಮೂಲಕ ಹೋಮ, ಹವನ ಸೇರಿದಂತೆ ಹಿಂದೂ ಆಚರಣೆ ಅವಮಾನ ಮಾಡುವುದು ಇವರ ಮುಖ್ಯ ಉದ್ದೇಶವಾಗಿದೆ. ಸನಾತನ ಹಿಂದೂ ಧರ್ಮದಿಂದ ದೂರ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

ವೀರಶೈವ ಲಿಂಗಾಯತ ಸನಾತನ ಧರ್ಮದ ಒಂದು ಭಾಗ. ಬಸವಣ್ಣನವರನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ. ಬಸವ ತತ್ವದ ಬಗ್ಗೆ ಮಾತನಾಡುವ ಸ್ವಾಮಿಗಳು ಯಾಕೆ ಹೋಮ, ಹವನ, ಪಾದ ಪೂಜೆ ಮಾಡಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಕೈಯಲ್ಲಿ ಇಟ್ಟುಕೊಂಡಿದ್ದಾರೆ.

ಈ ಮೂವರು ಮಹಾಸಭಾದಿಂದ ಹೊರಗೆ ಬರಬೇಕು. ವೀರಶೈವ ಮಹಾಸಭಾ ವಿಸರ್ಜನೆ ಮಾಡಬೇಕು. ಇದರಿಂದ ಯಾವುದೇ ವೀರಶೈವ ಲಿಂಗಾಯತ ಜನರಿಗೆ ಉಪಯೋಗವಿಲ್ಲ. ಇವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಹಿಂದೂ ಧರ್ಮವನ್ನು ಹೀಯಾಳಿಸುವ ಏಕತಾ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ಹಿಂದೂ ಧರ್ಮ ಬೇಡ ಎನ್ನುವವವರು ದೇಶವೇ ಬೇಡ ಎಂದ ಹಾಗೆ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ ವೀರೇಶೈವ ಅಧಿಕೃತ ಧರ್ಮವಲ್ಲ. ಅದಕ್ಕೆ ಕೇಂದ್ರ ಸರಕಾರದಿಂದ ಮಾನ್ಯತೆಯೂ ಸಿಕ್ಕಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂ ನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಬೇಕು ಎಂದು ವಿನಂತಿ ಮಾಡಿದರು.

ಬಿ.ಎಸ್. ಯಡಿಯೂರಪ್ಪ ಮಹಾಭ್ರಷ್ಟ. ಅವರ ಉದ್ದೇಶ ಲಿಂಗಾಯತರಿಗೆ ಓಬಿಸಿ ಕೊಡುವುದಲ್ಲ. ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬರೆಸುವಂತೆ ಹೇಳಿದ್ದು, ಸ್ವಾಗತಾರ್ಹ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬರೆಯಿಸಲು ಎಂದು ಹೇಳಿಲ್ಲ, ಸ್ವಾಮಿಗಳಿಗೆ ಬಿಟ್ಟಿದ್ದೇವೆ ಎಂದಿದ್ದಾರೆ.

ಬಿಜೆಪಿ ಹಿಂದೂಗಳ ಮತದಿಂದ ಅಧಿಕಾರಕ್ಕೆ ಬಂದಿದೆ. ಹಿಂದೂ ಧರ್ಮದ ರಕ್ಷಣೆಗೆ ಮತ ಹಾಕಿದ್ದಾರೆ. ಹಿಂದೂತ್ವ ಆಚರಣೆ ಬದ್ಧವಾಗಿದ್ದರೆ ಬಿಜೆಪಿಯಲ್ಲಿ ಉಳಿಯಬೇಕು. ಇಲ್ಲದಿದ್ದರೆ ಬಿಜೆಪಿ ಬಿಟ್ಟು ತೊಲಗಿ. ದೇಶದಲ್ಲಿ ಹಿಂದೂಗಳು ಎಲ್ಲರಿಗೆ ಉಳಿಗಾಲ. ಇಲ್ಲವಾದರೆ ಭಾರತ ಮುಸ್ಲಿಂ ದೇಶವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಾಬರ ಸರ್ಕಾರವಿದೆ. ಧರ್ಮಾಧರಿತ ಮುಸ್ಲಿಂ ಮೀಸಲಾತಿ ನೀಡಿದ್ದು ಏಕೆ? ಅಸಂವಿಧಾನಿಕ ನಡೆಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತಕ್ಕೆ ಅಪಮಾನ ಮಾಡಿದೆ. ಪಂಚಮಸಾಲಿ ಸಮಾಜದ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಿದಾಗ ಯಾಕೆ ಸುಮ್ಮನಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಏಕತಾ ಸಮಾವೇಶ ಬ್ಲಾಕ್ ಮೇಲ್ ಸಮಾವೇಶ. ಸಮಾವೇಶಕ್ಕೆ ಹೋಗುವವರನ್ನು ಮೊದಲು ಹೊರಹಾಕಬೇಕು. ಸಮಾವೇಶಕ್ಕೆ ಹೋಗುವವರಿಗೆ ನೋಟಿಸ್ ಕೊಡಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿದರು.

Previous article“ಯಾ ಅಲಿ” ಖ್ಯಾತಿಯ ಗಾಯಕ ಝುಬೀನ್ ಗರ್ಗ್ ಹಠಾತ್‌ ನಿಧನ
Next articleಆರ್ಥಿಕ ಸಾಮಾಜಿಕ ಸಮೀಕ್ಷೆಯಲ್ಲೂ ಬಿಜೆಪಿ ರಾಜಕಾರಣ: ಸಿಎಂ

LEAVE A REPLY

Please enter your comment!
Please enter your name here