ಹುಬ್ಬಳ್ಳಿ: ಬಂಗಾರದ ಸಾಲ 20 ಸಾವಿರ ಮರುಪಾವತಿ ವಿಚಾರದಲ್ಲಿ ನಡೆದ ಗಂಡ ಹೆಂಡತಿ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ವತಃ ಪೊಲೀಸರಿಗೆ ಶರಣಾಗಿರುವ ಘಟನೆ ಗೋಕುಲ ರಸ್ತೆ ರಾಮಲಿಂಗೇಶ್ವರನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ರಾಮಲಿಂಗೇಶ್ವರ ನಗರದ ತೈಸಿನ್ ಶಿಗ್ಗಾವಿ (27) ಹತ್ಯೆಯಾದ ಮಹಿಳೆ. ಆಕೆಯ ಪತಿ ಇರ್ಫಾನ್ ಶಿಗ್ಗಾವಿ (34) ಹತ್ಯೆ ಮಾಡಿದ ಆರೋಪಿ. ಬಂಗಾರದ ಸಾಲ 20 ಸಾವಿರ ರೂ. ಮರು ಪಾವತಿ ಮಾಡುವ ವಿಚಾರಕ್ಕೆ ಸಂಬಂಧಿಸಿ ಪತಿ, ಪತ್ನಿ ನಡುವೆ ಪದೆ ಪದೇ ಜಗಳವಾಗುತ್ತಿತ್ತು.
ಇದೇ ವಿಚಾರವಾಗಿ ಸೋಮವಾರ ಬೆಳಿಗ್ಗೆ ಮತ್ತೆ ಜಗಳ ನಡೆದಿದ್ದು, ಕೋಪಗೊಂಡ ಪತಿ ಇರ್ಫಾನ್, ತೈಸಿನ್‌ಗೆ ಚಾಕುವಿನಿಂದ ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ತಾನೇ ಗೋಕುಲ ರೋಡ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೇಶ್ವಾಪುರ ಗಾಂಧಿವಾಡ ನಿವಾಸಿ, ಗೌಂಡಿ ಕೆಲಸ ಮಾಡುವ ಇರ್ಫಾನ್ ಹಾಗೂ ರಾಮಲಿಂಗೇಶ್ವರ ನಗರದ ತೈಸಿನ್‌ಳನ್ನು ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇರ್ಫಾನ್ ಒಂದು ತಿಂಗಳ ಹಿಂದೆ ರಾಮಲಿಂಗೇಶ್ವರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ, ಮೃತ ಶವವನ್ನು ನಗರದ ಕೆಎಂಸಿಆರ್‌ಐ ಆಸ್ಪತ್ರೆ ರವಾನಿಸಿದ್ದಾರೆ.























