ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಗಣೇಶೋತ್ಸವವು ಈ ಬಾರಿಯೂ ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಗಣೇಶ ವಿಸರ್ಜನೆ ವೇಳೆ ಗಣೇಶ ಮೂರ್ತಿಗೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ಶಬರಿನಗರದಲ್ಲಿ ಏಳು ದಿನದ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಗಣಪತಿಗೆ ಹೂವಿನ ಹಾರ ಹಾಕುವುದರ ಮೂಲಕ ಭಕ್ತಿ ಮೆರೆದರು. ಅಲ್ಲದೇ ಶಾ ಬಜಾರ್ ಹತ್ತಿರ ಗಣೇಶ ವಿಸರ್ಜನೆಯ ಮೆರವಣಿಗೆ ಸಾಗುತ್ತಿದ್ದ ಘಂಟಿಕೇರಿ ಓಣಿಯ ಗಣಪತಿ ಮಂಡಳಿಯವರು ಮಸೀದಿ ಬಳಿ ಡಿಜೆಯಲ್ಲಿ ಕವಾಲಿ ಹಾಡು ಹಾಕುವ ಮೂಲಕ ಸೌಹಾರ್ದತೆ ಮೆರೆದರು.
ಧಾರವಾಡದಲ್ಲೂ ಭಾವೈಕ್ಯತೆ: ಧಾರವಾಡದ ಮಾಳಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭ ಮುಸ್ಲಿಮರು ಗಣೇಶನಿಗೆ ಹೂಮಾಲೆ ಹಾಕಿ ಪೂಜಿಸಿದ್ದಾರೆ.
ದ್ಯಾಮವ್ವನ ಗುಡಿ ಬಳಿ ಗಜಾನನ ಯುವಕ ಮಂಡಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೊಂಡು 9ನೇ ದಿನವಾದ ಗುರುವಾರ ವಿಸರ್ಜನೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಮುಸ್ಲಿಮರು ಪಾಲ್ಗೊಂಡು ಭಾವೈಕ್ಯದಿಂದ ಉತ್ಸವ ಆಚರಿಸಿದರು.
ವಿಸರ್ಜನಾ ಮೆರವಣಿಗೆ ಮಾಳಾಪುರದ ಮಸೀದಿ ಬಳಿ ಬರುತ್ತಿದ್ದಂತೆ ಮುಸ್ಲಿಂ ಸಮುದಾಯದಿಂದ ಗಣೇಶನಿಗೆ ಹೂಮಾಲೆ ಹಾಕಿದರು. ಈ ವೇಳೆ ʻನೀನೇ ರಾಮ ನೀನೇ ಶಾಮ, ನೀನೇ ಅಲ್ಲಾಹು, ನೀನೇ ಯೇಸು….’ ಹಾಡನ್ನು ಹಾಕಿ ಸಂಭ್ರಮಿಸಿದರು.