ಹುಬ್ಬಳ್ಳಿ: ವಿವಸ್ತ್ರ ಪ್ರಕರಣ, ಶಾಸಕ ಟೆಂಗಿನಕಾಯಿ ಟೂಲ್‌ಕಿಟ್ – ರಜತ್ ಆರೋಪ

0
5

ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆ ವಿವಸ್ತ್ರಗೊಂಡ ಪ್ರಕರಣವು ಶಾಸಕ ಮಹೇಶ ಟೆಂಗಿನಕಾಯಿ ಅವರ ರಾಜಕೀಯ ಟೂಲ್‌ಕಿಟ್ ಆಗಿದ್ದು, ಕ್ಷೇತ್ರದಲ್ಲಿ ತಮ್ಮ ಹಿಡಿತ ಕಾಪಾಡಿಕೊಳ್ಳಲು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದಲೇ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: WPL : ಇಂದು ಚಾಂಪಿಯನ್‌ಗಳ ಕದನ – MI vs RCB ವಿಡಿಯೋ ನೋಡಿ: MI vs RCB – WPL 2026 Blockbuster Match!

ಐದು ನಿಮಿಷದ ವಿಡಿಯೋ ಬಿಡುಗಡೆ: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಯೊಬ್ಬರ ಮೇಲೆ ಮೃಗೀಯವಾಗಿ ಹಲ್ಲೆ ನಡೆಸುತ್ತಿರುವ ಐದು ನಿಮಿಷದ ವಿಡಿಯೋವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ ರಜತ್, “ವಿಡಿಯೋದಲ್ಲಿ ಸುಜಾತಾ ಅವರು ಮಚ್ಚು ಹಾಗೂ ಲೆದರ್ ಬೆಲ್ಟ್ ಹಿಡಿದು ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ” ಎಂದು ತಿಳಿಸಿದರು.

ಆ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಯಾರು, ಅದು ಎಷ್ಟು ವರ್ಷಗಳ ಹಿಂದಿನದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ನಮಗೆ ದೊರೆತಿರುವ ದೃಶ್ಯಾವಳಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತಿದ್ದೇವೆ. ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ನ್ಯಾಯ ಸಿಗಬೇಕು. ಈ ಸಂಬಂಧ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ವಿಲೀನದ ಚರ್ಚೆ ಬಿಟ್ಟು ಆಡಳಿತಾನುಭವದ ಬಗ್ಗೆ ಜನರನ್ನೇ ಕೇಳಿ: DKಗೆ HDK ತಿರುಗೇಟು

ಶಾಸಕರ ಮೇಲೆ ಗಂಭೀರ ಆರೋಪ: ಕುಟುಂಬ ಮ್ಯಾಪಿಂಗ್ ಸಮೀಕ್ಷೆ ವೇಳೆ ಚಾಲುಕ್ಯನಗರದಲ್ಲಿ ನಡೆದ ಗಲಾಟೆ ನಂತರ, ಶಾಸಕ ಮಹೇಶ ಟೆಂಗಿನಕಾಯಿ ಅವರು ಸುಜಾತಾ ಹಂಡಿ ಅವರ ಮನೆಯಲ್ಲಿ ಸಭೆ ನಡೆಸಿದ್ದರು ಎಂಬ ಆರೋಪವನ್ನೂ ರಜತ್ ಉಳ್ಳಾಗಡ್ಡಿಮಠ ಮುಂದಿಟ್ಟರು. “ಅಪರಾಧ ಹಿನ್ನೆಲೆಯುಳ್ಳ ಮಹಿಳೆ ಹಾಗೂ ರೌಡಿಗಳನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಶಾಸಕರೇ ನೇರ ಹೊಣೆಗಾರರು” ಎಂದು ಅವರು ಕಿಡಿಕಾರಿದರು.

ಬಿಜೆಪಿ ಪ್ರತಿಭಟನೆ ಕುರಿತು ಟೀಕೆ: ಮಹಿಳೆ ವಿವಸ್ತ್ರಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಬಿಜೆಪಿ ನಾಯಕರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ರಜತ್, “ಮೊದಲು ಬಿಜೆಪಿ ನಾಯಕರು ನಾವು ಬಿಡುಗಡೆ ಮಾಡಿದ ವಿಡಿಯೋವನ್ನು ನೋಡಲಿ. ಮಾನ, ಮರ್ಯಾದೆ ಇದ್ದರೆ ಅವರು ಪ್ರತಿಭಟನೆಗೆ ಬರುವುದೇ ಇಲ್ಲ” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್‍: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?

ರಾಜಕೀಯ ಅಭದ್ರತೆ ಕಾರಣ?: ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ರಾಜಕೀಯವಾಗಿ ಅಭದ್ರತೆ ಶುರುವಾಗಿದೆ ಎಂದು ಆರೋಪಿಸಿದ ಅವರು, “ಅವರ ಗುರು ಜಗದೀಶ ಶೆಟ್ಟರ್ ಮತ್ತೆ ಸೆಂಟ್ರಲ್ ಕ್ಷೇತ್ರ ಪಡೆಯಬೇಕು ಎನ್ನುವ ಹಠದಲ್ಲಿದ್ದಾರೆ. ಇನ್ನು ಕೆಲವರು ಕೂಡ ಆ ಕ್ಷೇತ್ರದ ಮೇಲೆ ಕಣ್ಣಿಟ್ಟು ಸಿದ್ಧತೆ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಆತಂಕಗೊಂಡಿರುವ ಶಾಸಕ, ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಸೆಂಟ್ರಲ್ ಕ್ಷೇತ್ರದಲ್ಲಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ” ಎಂದು ಹೇಳಿದರು.

Previous articleWPL : ಇಂದು ಚಾಂಪಿಯನ್‌ಗಳ ಕದನ – MI vs RCB