ಹುಬ್ಬಳ್ಳಿ: ಯುವತಿಯ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪ್ಕೆ ತಿರುಗಿದ ಪರಿಣಾಮ ರೇಡಿಯಂ ಕಟರ್‌ನಿಂದ ಇಬ್ಬರನ್ನು ಇರಿಯಲಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾನಗರದ ಗ್ಲೋಬಲ್ ಕಾಲೇಜು ಬಳಿ ಸೋಮವಾರ ತಡ ರಾತ್ರಿ ಘಟನೆ ನಡೆದಿದ್ದು, ಅಭಿಷೇಕ ಬಂಡಿವಡ್ಡರ ಹಾಗೂ ಮಾರುತಿ ಬಂಡಿವಡ್ಡರ ಎಂಬುವವರಿಗೆ ಚಾಕು ಇರಿಯಲಾಗಿದೆ. ದೇಶಪಾಂಡೆ ನಗರದ ಪವನ ಮತ್ತು ಮಣಿಕಂಠ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳಗಳೂ ನಡೆಯುತ್ತಿದ್ದವು.
ಜಗಳ ಅತಿಯಾದಾಗ ಪವನ, ಅಭಿಷೇಕ ಮತ್ತು ಮಾರುತಿಯನ್ನು ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಪವನ್ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಅದನ್ನು ತಡೆಯಲು ಮಧ್ಯ ಪ್ರವೇಶಿಸಿದ್ದ ಅಭಿಷೇಕ ಮತ್ತು ಮಾರುತಿ ಮೇಲೆ ರೇಡಿಯಂ ಕಟರ್‌ನಿಂದ ಹಲ್ಲೆ ಮಾಡಲಾಗಿದೆ.
ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರೆಲ್ಲ ವಿದ್ಯಾರ್ಥಿಗಳಾಗಿದ್ದು, ಈಗಾಗಲೇ ಮಣಿಕಂಠ, ಮನೋಜ್, ಸುಬ್ರಹ್ಮಣ್ಯ, ಅನುಪ್, ಪ್ರಜ್ವಲ, ಶಂಕರ ಮತ್ತು ಅಭಯ ಎಂಬುವವರನ್ನು ಬಂಧಿಸಲಾಗಿದೆ. ಗಾಯಗೊಂಡವರು ಆಟೋ ನಡೆಸಿ ಜೀವನ ನಿರ್ವಹಣೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























