ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾಯಕ ಮಹಿಳೆಯ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ–ಹುಬ್ಬಳ್ಳಿ ಸಂಸದರಾದ ಪ್ರಲ್ಹಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮಹಿಳೆಯರನ್ನು ಅಸಭ್ಯವಾಗಿ ನಡೆಸಿಕೊಂಡಿರುವ ರೀತಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರು ತಮ್ಮ ದರ್ಪ ಮತ್ತು ಅಧಿಕಾರದ ದುರುಪಯೋಗ ತೋರಿಸಿರುವುದು ರಾಜ್ಯದಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಜೋಶಿ ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನೀತಿಯನ್ನು ಅನುಸರಿಸುತ್ತಿದೆ. ತುಘಲಕ್ ಸಾಮ್ರಾಜ್ಯವನ್ನು ಮರುಸ್ಥಾಪಿಸುವಂತೆ ಆಡಳಿತ ನಡೆಯುತ್ತಿದೆ ಎಂದು ತೀವ್ರ ಟೀಕಿಸಿದ್ದಾರೆ. ಇಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಜನರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಹಾಗೂ ನಾಟಕಗಳಲ್ಲಿ ಮುಳುಗಿದ್ದಾರೆ. ಇದರ ಪರಿಣಾಮವಾಗಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಇಂದಿನ ಈ ಘಟನೆ ತೀರ ಖಂಡನೀಯವಾಗಿದ್ದು, ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಹಾಗೂ ಈ ಪಿತೂರಿಗೆ ಕಾರಣರಾದ ಎಲ್ಲರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೋಶಿ ಕಿಡಿಕಾರಿದ್ದಾರೆ.






















