ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಮುಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾರ್ಚ್ ವರೆಗೆ ಸಮಯಾವಕಾಶ ಕೋರಿದ್ದು, ಜನವರಿವರೆಗೆ ಪೂರ್ಣಗೊಳಿಸಲು ಸೂಚಿಸಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮೇಲ್ಸೇತುವೆ ಕಾಮಗಾರಿ ಕುರಿತಂತೆ ಶಾಸಕರು, ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಮೈದಾನದ ಬಳಿ ಕಾಮಗಾರಿ ಪೂರ್ಣವಾಗಲು ಇನ್ನೂ 10ರಿಂದ 15 ದಿನದ ಸಮಯಾವಕಾಶ ಬೇಕಾಗಲಿದೆ. ಹಳೆ ಬಸ್ ನಿಲ್ದಾಣದಿಂದ ವಾಹನ ಮರು ಆರಂಭಿಸಲು ಚಿಂತನೆ ನಡೆದಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮುಂದಿನ ಹೆಜ್ಜೆ ಇಡಲಾಗುವುದು. ಗಣೇಶ ವಿಸರ್ಜನೆಗೆ ನಿಲಿಜಿನ್ ಮತ್ತು ಕಾರವಾರ ರಸ್ತೆ ಬಳಕೆ ಮಾಡಲಾಗುವುದು ಎಂದರು.
ಸೇತುವೆ ಕಾಮಗಾರಿ ಒಂದು ಹಂತದಲ್ಲಿ ವೇಗ ಪಡೆದಿದೆ. 11 ಗರ್ಡರ್‌ಗಳು ಸಿದ್ಧವಾಗಿವೆ. ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿ 96 ಗರ್ಡರ್ ಬೇಕು. ಈ ಮಾರ್ಗದಲ್ಲಿ ಅ. 1ರಿಂದ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು.
ಹು-ಧಾ ಬೈಪಾಸ್ ರಸ್ತೆಗೆ ಸಣ್ಣ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಈ ಕಾಮಗಾರಿ ಏಪ್ರಿಲ್ 2026ಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ. ರಾಜ್ಯದಲ್ಲಿ ಅತೀ ಮಳೆಯಿಂದ 80 ಸಾವಿರ ಟನ್ ಹೆಸರು ಬೆಳೆ ಹಾನಿಯಾಗಿದೆ.
ಎನ್‌ಡಿಆರ್‌ಎಫ್‌ನಿಂದ ಪರಿಹಾರ ಒದಗಿಸಲಾಗುವುದು: ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಹುಬ್ಬಳ್ಳಿಗೆ ಮೇಲ್ಸೇತುವೆ ಮತ್ತು ಎಲಿವೇಟೆಡ್ ರಸ್ತೆ ಕೇಳಿದ್ದರು. ಕೇಂದ್ರ ಸರ್ಕಾರದಿಂದ ಹಣ ವಿನಿಯೋಗಿಸಲಾಗಿದೆ. ಯೋಜನೆಗಳಿಗೆ ಹಣ ಕೊಡಿಸಬಹುದು. ಆದರೆ ಕಾಮಗಾರಿ ಆರಂಭಿಸುವುದು ಯಾರು?. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಡಿಪಿಆರ್ ಸಲ್ಲಿಸಲಿಲ್ಲ. ರಾಜ್ಯ ಸರ್ಕಾರವೂ ಇದಕ್ಕೆ ಆಸಕ್ತಿ ತೋರಲಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಸೋಲಾರ್ ಶಕ್ತಿ ಯೋಜನೆಗೆ ಉತ್ರಮ ಪ್ರತಿಕ್ರಿಯೆ: 2030ರಲ್ಲಿ ಶೇ. 50ರಷ್ಟು ಸೋಲಾರ್ ಪವರ್ ಬಳಸುವಂತಾಗಬೇಕು. ರಾಜ್ಯದಲ್ಲಿ ಪಿಎಂ ಕುಸುಮ್ ಮತ್ತು ಸೂರ್ಯಘರ್ ಸರಿಯಾಗಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಪಿಎಂ ಕುಸುಮ್ 2.0ದಲ್ಲಿ ಹೆಚ್ಚಿನ ಅನುದಾನ ನೀಡಿವುದಾಗಿ ಭರವಸೆ ನೀಡಿದ್ದೇವೆ. ವಿಂಡ್ ಪವರ್‌ನಲ್ಲಿ ರಾಜ್ಯ ದೇಶದಲ್ಲಿ ಒಂದನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.