ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರಿನಲ್ಲಿ ನಿರ್ಮಿಸಿರುವ ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮೇಲೆ ಬೃಹತ್ ಕಟೌಟ್ ಕುಸಿದು ಗಂಭೀರ ಗಾಯಗಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಈ ಘಟನೆಯಲ್ಲಿ ಬ್ಯಾಹಟ್ಟಿ ಗ್ರಾಮದ ಶಂಕರ ಹಡಪದ ಹಾಗೂ ಗಂಗಾಧರ ನಗರದ ಶಾಂತಾ ಕ್ಯಾರಕಟ್ಟಿ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರು ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದು, ಅಗತ್ಯವಿರುವ ಎಲ್ಲ ರೀತಿಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಟೌಟ್ ಕುಸಿತ: ಮೂವರು ಗಂಭೀರ ಗಾಯ
ಇನ್ನು, ಈ ಘಟನೆಯಲ್ಲಿ ಗಾಯಗೊಂಡಿರುವ ಶಾಂತಿನಗರದ ಮಂಜುನಾಥ ವೆರ್ಣೇಕರ ಅವರನ್ನು ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಕೂಡ ಸಚಿವರು ವೈದ್ಯರಿಂದ ಆರೋಗ್ಯ ಮಾಹಿತಿ ಪಡೆದುಕೊಂಡರು.
ಗಾಯಾಳು ಕುಟುಂಬದ ಕಣ್ಣೀರ ಕಥೆ: ಘಟನೆ ಕುರಿತು ಗಾಯಾಳು ಶಾಂತಾ ಕ್ಯಾರಕಟ್ಟಿ ಅವರ ಪುತ್ರ ಶಶಿಕಾಂತ ಕ್ಯಾರಕಟ್ಟಿ ಮಾಧ್ಯಮಗಳಿಗೆ ವಿವರ ನೀಡಿದರು. “ಮನೆಯಿಲ್ಲದವರಿಗೆ ಮನೆ ಹಂಚಿಕೆ ಮಾಡುತ್ತಾರೆ ಎಂಬ ಸುದ್ದಿ ಕೇಳಿ ತಾಯಿಯೊಂದಿಗೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದೆ. ಆಟೋದಿಂದ ಇಳಿದು ಪೆಂಡಾಲ್ ಕಡೆಗೆ ತೆರಳುತ್ತಿದ್ದಾಗ, ಎಡಗಡೆ ಅಳವಡಿಸಿದ್ದ ಬೃಹತ್ ಕಟೌಟ್ ಏಕಾಏಕಿ ಕುಸಿದು ಬಿತ್ತು. ಅದರ ಕೆಳಗೆ ನನ್ನ ತಾಯಿ ಶಾಂತಾ ಸೇರಿದಂತೆ ಮೂವರು ಸಿಲುಕಿ ಗಾಯಗೊಂಡರು. ಎಂದು ಅವರು ದುಃಖದಿಂದ ಹೇಳಿದರು.









