ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಕಟೌಟ್‌ಗಳು ಕುಸಿದು ಬಿದ್ದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕಾರ್ಯಕ್ರಮಕ್ಕೆ ಸಂಬಂಧಿಸಿ, ಮಂಟೂರ ರಸ್ತೆ ಸುತ್ತಮುತ್ತ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಟೌಟ್‌ಗಳು ಏಕಾಏಕಿ ಕುಸಿದು ಬಿದ್ದಿವೆ.
ಇದನ್ನೂ ಓದಿ: ಸರ್ಕಾರದಿಂದ ‘ಲಿಕ್ಕರ್ ಗ್ಯಾರಂಟಿ’ ಯೋಜನೆ?: ಶಾಸಕ ಟೆಂಗಿನಕಾಯಿ ವ್ಯಂಗ್ಯ
ಮೂವರಿಗೆ ಗಂಭೀರ ಗಾಯ: ಕಟೌಟ್ ಕುಸಿದ ವೇಳೆ ಅದರ ಕೆಳಗಿದ್ದ ಮೂರು ಜನರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ರಕ್ಷಿಸಿ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುರಕ್ಷತಾ ಲೋಪದ ಶಂಕೆ: ಘಟನೆಯಿಂದಾಗಿ ಕಾರ್ಯಕ್ರಮದ ತಯಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಂಡಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಬೃಹತ್ ಕಟೌಟ್‌ಗಳನ್ನು ಅಳವಡಿಸುವಾಗ ಬಲವಾದ ಅಡಿಪಾಯ, ಗಾಳಿ–ಮಳೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ
ಪೊಲೀಸ್ ತನಿಖೆ: ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟೌಟ್ ಕುಸಿತಕ್ಕೆ ನಿಖರ ಕಾರಣ ಏನು? ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ? ಎಂಬ ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಲಾಗಿದೆ. “ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.






















