ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ, ಸುತಗಟ್ಟಿ, ನವನಗರ, ಸತ್ತೂರ ಸುತ್ತಮುತ್ತ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಮತ್ತು ಆತಂಕ ಉಂಟುಮಾಡಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ದೀರ್ಘಕಾಲದ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಈ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿತ್ತು. ಗಾಮನಗಟ್ಟಿ, ವಿಮಾನ ನಿಲ್ದಾಣ, ನವನಗರ, ಸುತಗಟ್ಟಿ ಭಾಗದ ಜನರ ನಿದ್ದೆ ಕೆಡಿಸಿದ್ದ ಚಿರತೆ ಪ್ರತಿದಿನ ಸ್ಥಳ ಬದಲಾಯಿಸಿಕೊಂಡು ಓಡಾಡುತ್ತಿದ್ದು, ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಜೀವ ಬೆದರಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಕೇರಳದಲ್ಲಿ ಅರೆಸ್ಟ್
ಚಿರತೆ ಇರುವುದನ್ನು ದೃಢಪಡಿಸಿದ ನಂತರ ಅರಣ್ಯ ಇಲಾಖೆ ವ್ಯಾಪಕ ಕಾರ್ಯಾಚರಣೆಗೆ ಮುಂದಾಗಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಮೈಸೂರಿನ ಚಿರತೆ ಕಾರ್ಯಪಡೆ ತಂಡದೊಂದಿಗೆ ಹುಬ್ಬಳ್ಳಿ, ಧಾರವಾಡ ಮತ್ತು ಗದುಗಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲಿರುಳು ಶ್ರಮವಹಿಸಿದ್ದರು. ಚಿರತೆ ಸೆರೆ ಹಿಡಿಯಲು ಮೈಸೂರಿನಿಂದ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಅತ್ಯಾಧುನಿಕ ಥರ್ಮಲ್ ಡ್ರೋನ್‌ಗಳನ್ನು ತರಿಸಲಾಗಿತ್ತು.
ಆದರೂ ಚಿರತೆ ನಿರಂತರವಾಗಿ ತನ್ನ ಓಡಾಟದ ಮಾರ್ಗ ಬದಲಾಯಿಸುತ್ತಾ, ಅರಣ್ಯ ಇಲಾಖೆಯ ಎಲ್ಲಾ ತಂತ್ರಗಳನ್ನು ತಪ್ಪಿಸಿಕೊಂಡಿತ್ತು. ಸಾರ್ವಜನಿಕರ ಸುರಕ್ಷತೆಗಾಗಿ ಐದು ಪಂಜರಗಳನ್ನು ವಿವಿಧ ಪ್ರದೇಶಗಳಲ್ಲಿ ಇಡಲಾಗಿತ್ತು. ಗದುಗಿನಿಂದ ಅರವಳಿಕೆ ತಜ್ಞರನ್ನು ಕರೆಯಿಸಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೋಮವಾರದಂದು ತುಮಕೂರಿನಿಂದ ಮತ್ತೊಂದು ಪಂಜರವನ್ನು ತರಿಸಿ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಹಾಡು ಹಗಲೇ ಬಂಗಾರದ ಅಂಗಡಿ ದರೋಡೆ
ಕೊನೆಗೂ ಸೋಮವಾರ ರಾತ್ರಿ ಸುಮಾರು 9:30ರ ಸುಮಾರಿಗೆ ವಿಮಾನ ನಿಲ್ದಾಣದ ಬಳಿ ಇಡಲಾಗಿದ್ದ ಪಂಜರದಲ್ಲಿ ಚಿರತೆ ಸೆರೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆಯ ಆರ್‌ಎಫ್‌ಓ ಉಪ್ಪಾರ ಅವರು, ಸಾರ್ವಜನಿಕರ ಸಹಕಾರ ಹಾಗೂ ಸಿಬ್ಬಂದಿಗಳ ಶ್ರಮದಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು.
ಈ ಚಿರತೆ ಡಿಸೆಂಬರ್ 18ರಂದು ಮೊದಲ ಬಾರಿಗೆ ವಿಮಾನ ನಿಲ್ದಾಣ ಹಿಂಭಾಗದ ಗಾಮನಗಟ್ಟಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಕಾಣಿಸಿಕೊಂಡಿತ್ತು. ಅಂದಿನಿಂದ ವಿಮಾನ ನಿಲ್ದಾಣ, ಗಾಮನಗಟ್ಟಿ, ನವನಗರ, ಸುತಗಟ್ಟಿ, ಸತ್ತೂರ ಸುತ್ತಮುತ್ತ ಓಡಾಡಿಕೊಂಡು ಜನರಲ್ಲಿ ಭೀತಿ ಉಂಟುಮಾಡಿತ್ತು. ಇದೀಗ ಚಿರತೆ ಸೆರೆಯಾಗಿರುವುದರಿಂದ ಅರಣ್ಯ ಇಲಾಖೆ ಮಾತ್ರವಲ್ಲದೆ, ಸ್ಥಳೀಯ ನಿವಾಸಿಗಳು ಸಹ ನಿಟ್ಟುಸಿರು ಬಿಡುವಂತಾಗಿದೆ.























