200 ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ
ಧಾರವಾಡ: ಜಾಗತಿಕ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಹಿಟಾಚಿ (Hitachi) ತನ್ನ ನೂತನ ಘಟಕವನ್ನು ಹುಬ್ಬಳ್ಳಿ–ಧಾರವಾಡ ಪ್ರದೇಶದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದೆ. ಈ ವಿಷಯವನ್ನು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಅಧಿಕೃತವಾಗಿ ತಿಳಿಸಿದ್ದಾರೆ.
ಇತ್ತಿಚೆಗೆ ಸಚಿವ ಪಾಟೀಲ ಅವರು ಜಪಾನ್ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಭೇಟಿಯ ವೇಳೆ ಹಿಟಾಚಿ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ನಂತರ, ಧಾರವಾಡದಲ್ಲಿ ನಿರ್ಮಾಣ ಯಂತ್ರಗಳು ಹಾಗೂ ಬಿಡಿಭಾಗಗಳ ವಿನ್ಯಾಸ ಮತ್ತು ತಯಾರಿಕೆ ಮಾಡುವ ನೂತನ ಘಟಕವನ್ನು ಸ್ಥಾಪಿಸಲು ಕಂಪನಿ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
200 ಎಂಜಿನಿಯರ್‌ಗ ಉದ್ಯೋಗಾವಕಾಶ: ಸಚಿವರ ಪ್ರಕಾರ, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ “ಬೆಂಗಳೂರು ಹೊರಗೆ ಅಭಿವೃದ್ಧಿಯನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋಗುವ ಮೂಲಕ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ಈ ಘಟಕದಿಂದ ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಚೈತನ್ಯ ಉಂಟಾಗಲಿದ್ದು, ಸುಮಾರು 200 ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಯೋಜನೆ 2027ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹಿಟಾಚಿ ಸಂಸ್ಥೆ ಭಾರತದಲ್ಲಿಯೇ ಹಲವು ಪ್ರಮುಖ ಯೋಜನೆಗಳಲ್ಲಿ ತೊಡಗಿಕೊಂಡಿದ್ದು, ಈ ಹೊಸ ಘಟಕವು ಕರ್ನಾಟಕದ ತಂತ್ರಜ್ಞಾನ ಮತ್ತು ಕೈಗಾರಿಕಾ ಶಕ್ತಿ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹುಬ್ಬಳ್ಳಿ–ಧಾರವಾಡದ ಕೈಗಾರಿಕಾ ಪರಿಸರ, ಸಂಪರ್ಕ ಸೌಲಭ್ಯ ಮತ್ತು ಶಿಕ್ಷಣ ಕೇಂದ್ರಗಳ ಹತ್ತಿರತೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.