ಧಾರವಾಡ: ಉತ್ತರ ಕರ್ನಾಟಕದಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಬುಧವಾರ ಸಂಜೆ ಸುಮಾರು ಒಂದೂವರೆ ಗಂಟೆ ಕಾಲ ರಭಸದ ಮಳೆ ಸುರಿಯಿತು.
ಗಾಳಿಯಿಂದ ಕೂಡಿದ ಮಳೆಯಿಂದಾಗಿ ಧಾರವಾಡ-ಹುಬ್ಬಳ್ಳಿಯ ಹಲವೆಡೆ ಮರಗಳು ಬಿದ್ದಿವೆ. ಕಲ್ಯಾಣನಗರ, ಸಪ್ತಾಪುರ, ಮರಾಠಾ ಕಾಲನಿ ಸೇರಿದಂತೆ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಟಿವಿ ಟಾವರ್ ರಸ್ತೆಯಲ್ಲಿ ವಿದ್ಯುತ್ ತಂತಿ ಹರಿದುಬಿದ್ದಿದ್ದರಿಂದ ರಸ್ತೆ ಸಂಚಾರವನ್ನು ಬಂದ್ ಮಾಡಲಾಯಿತು. ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್ ಮೂಲಕ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದ ಜನರು ಅನ್ಯಮಾರ್ಗಗಳ ಮೂಲಕ ಸಂಚರಿಸುವುದು ಅನಿವಾರ್ಯವಾಯಿತು.
ಮಳೆಯಿಂದಾಗಿ ಎನ್ಟಿಟಿಎಫ್, ಟೋಲ್ನಾಕಾ ಹಾಗೂ ಯಾಲಕ್ಕಿ ಶೆಟ್ಟರ ಕಾಲನಿ ಸೇರಿದಂತೆ ಹಲವೆಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಭಸದ ಗಾಳಿಯ ಕಾರಣದಿಂದಾಗಿ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದರಿಂದ ಕತ್ತಲೆಯಲ್ಲಿಯೇ ಸಂಚರಿಸಬೇಕಾಯಿತು.





















